ಬೆಂಗಳೂರು: ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡದ ಬಾವುಟವನ್ನು ಸುಟ್ಟು ಅಪಮಾನ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿಯೂ ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿತ್ತು. ವಿವಾದ ಇಲ್ಲಿಗೆ ಮುಗಿಯದೇ ಬೆಳಗಾವಿಯ ಅನಗೋಳದಲ್ಲಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಎಂಇಎಸ್‌ನ ಕಾರ್ಯಕರ್ತರು ವಿರೂಪಗೊಳಿಸಿದ್ದರು. ಹೀಗಾಗಿ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು, ಚಿತ್ರನಟರು ಸೇರಿದಂತೆ ಕನ್ನಡಾಭಿಮಾನಿಗಳು ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕೇಳಿಬರುತ್ತಿರುವ ಕೂಗಿನ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಸದನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಕರ್ನಾಟಕದ ನೆಲ, ಜಲ, ಭಾಷೆ, ಕಾನೂನನ್ನು ಗೌರವಿಸದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿಬರುತ್ತಿದೆ. ಸದನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದಿದ್ದಾರೆ.