ಪಾಕಿಸ್ತಾನ; ಸರ್ ವಿವಿಯನ್ ರಿಚರ್ಡ್ಸ್, ಡೇವಿಡ್ ಗೋವರ್ ಸೇರಿದಂತೆ ದಿಗ್ಗಜರು ಪಾಲ್ಗೊಂಡಿದ್ದ ಪಾಕಿಸ್ತಾನದ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೆಬ್ ಅಖ್ತಾರ್ ಅವಮಾನಿತನಾಗಿ ಚರ್ಚಾ ಕಾರ್ಯಕ್ರಮದ ನಡುವೆಯೇ ಹೊರನಡೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್’ಗಳು ಎಡವಿದ್ದಾರ ಎಂಬ ಪ್ರಶ್ನೆಯನ್ನು ನಿರೂಪಕ ಡಾ. ನೌಮಾನ್ ನಿಯಾಝ್ ಅಖ್ತಾರ್ ಅವರಿಗೆ ಕೇಳಿದ್ದರು. ಆದರೆ ನೌಮಾನ್ ನಿಯಾಝ್ ಕೇಳಿದ್ದ ಪ್ರಶ್ನೆಗೆ ಉತ್ತರಿಸುವ ಬದಲು ಶೊಯೆಬ್ ಅಖ್ತಾರ್, ಬೌಲರ್ ಹಾರಿಸ್ ರೌಫ್ ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ಆದರೆ ತಾನು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖ್ತರ್ ವಿರುದ್ಧ ಕೋಪಗೊಂಡ ನಿರೂಪಕ ” ನೀವು ನನ್ನ ಜೊತೆ ತಪ್ಪಾಗಿ ವರ್ತಿಸುತ್ತಿದ್ದೀರಿ. ಇದನ್ನು ಸಹಿಸಲು ಸಾಧ್ಯವಿಲ್ಲ. ನೀವು ಕಾರ್ಯಕ್ರಮದಿಂದ ನಿರ್ಗಮಿಸಿವುದು ಒಳ್ಳೆಯದು. ನಾನು ನೇರ ಪ್ರಸಾರದಲ್ಲೇ ಇದನ್ನು ಹೇಳುತ್ತಿದ್ದೇನೆ “
“ನೀವು ಒರಟಾಗಿ ಮಾತನಾಡುತ್ತಿದ್ದೀರಿ. ನಾನು ಇದನ್ನು ಹೇಳಲು ಬಯಸುವುದಿಲ್ಲ ಆದರೂ ನೀವು ಓವರ್’ಸ್ಮಾರ್ಟ್ ಆಗಲು ಪ್ರಯತ್ನಿಸುವುದಾದರೆ ನೀವಿಲ್ಲಿಂದ ಹೊರಡಬಹುದು” ಎಂದು ನಿರೂಪಕ ನೇರವಾಗಿಯೇ ಹೇಳಿದ ಬಳಿಕ ಕಾರ್ಯಕ್ರಮದಲ್ಲಿ ಬ್ರೇಕ್ ತೆಗೆದುಕೊಳ್ಳಲಾಯಿತು.
ಬ್ರೇಕ್ ನಿಂದ ಬಳಿಕ ನಿರೂಪಕನ ತನ್ನ ಮಾತಿಗೆ ಕ್ಷಮೆ ಕೇಳಬೇಕು ಎಂದು ಅಖ್ತಾರ್ ಒತ್ತಾಯಿಸಿದರೂ, ನಿರೂಪಕ ಡಾ. ನೌಮಾನ್ ನಿಯಾಝ್ ಬೇರೆ ಅತಿಥಿಗಳೊಡನೆ ಚರ್ಚೆ ನಡೆಸುತ್ತಿದ್ದರು. ಆದರೂ ಶಾಂತವಾಗಿಯೇ ಇದ್ದ ಶೊಯೆಬ್ ಅಖ್ತಾರ್, ಅತಿಥಿಗಳಲ್ಲಿ ಕ್ಷಮೆ ಯಾಚಿಸಿ ತಾನು ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದೇನೆ. ಹಾಗೂ PTVಯ ಕ್ರೀಡಾ ವಿಶ್ಲೇಷಕ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ಆದರೂ ನಿರೂಪಕ ಡಾ. ನೌಮಾನ್ ನಿಯಾಝ್, ಏನೂ ಆಗದವರ ರೀತಿಯಲ್ಲಿ ಮಾತನಾಡುತ್ತಲೇ ಇದ್ದರು.
ಟಿವಿ ಚರ್ಚಾ ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಟ್ವಿಟರ್ ಖಾತೆಯಲ್ಲಿ ವೀಡಿಯೋ ಮೂಲಕ ಘಟನೆಯ ಬಗ್ಗೆ ಅಖ್ತಾರ್ ಮಾತಾಡಿದ್ದಾರೆ. ವಿಶ್ವದ ಪ್ರಮುಖ ಕ್ರೀಡಾ ತಾರೆಯರ ನಡುವೆ ನಿರೂಪಕ ನನಗೆ ಅವಮಾನ ಮಾಡಿದ್ದಾನೆ. ಕ್ಷಮೆ ಕೇಳುವಂತೆ ಕೋರಿದರೂ ಆತ ಒಪ್ಪಲಿಲ್ಲ. ಹೀಗಾಗಿ ನಾನು ಕಾರ್ಯಕ್ರಮದಿಂದ ಹೊರ ಬಂದೆ ಎಂದು ಅಖ್ತಾರ್ ಹೇಳಿದ್ದಾರೆ.
ನಿರೂಪಕ ಡಾ. ನೌಮಾನ್ ನಿಯಾಝ್ ತನ್ನ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರೆ. ಆದರೆ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಹುತೇಕ ಮಂದಿ ನಿರೂಪಕನ ನಡೆಗೆ ವ್ಯಾಪಾಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಪ್ರಮುಖ ಚಾನಲ್ PTV ಯಲ್ಲಿ ನಡೆದ ಚರ್ಚೆಯಲ್ಲಿ ಶೊಯೆಬ್ ಅಖ್ತಾರ್ ಜೊತೆಗೆ ಸರ್ ವಿವಿಯನ್ ರಿಚರ್ಡ್ಸ್, ಡೇವಿಡ್ ಗೋವರ್ ಹಾಗೂ ಪಾಕಿಸ್ತಾನದ ಮಾಜಿ ಆಟಗಾರಾದ ರಶೀದ್ ಲತೀಫ್, ಉಮರ್ ಗುಲ್, ಆಖಿಬ್ ಜಾವೆದ್ ಹಾಗೂ ಪಾಕಿಸ್ತಾನದ ಮಹಿಳಾ ತಂಡದ ನಾಯಕಿ ಸನಾ ಮೀರ್ ಪಾಲ್ಗೊಂಡಿದ್ದರು.