Home ಟಾಪ್ ಸುದ್ದಿಗಳು ಎಲ್ಲರೂ ‘ಭಾಭಿಜಿಯ ಪಾಪಡ್’ ತಿಂದು ಕೋವಿಡ್ ನಿಂದ ಗುಣಮುಖರಾಗಿರುವುದೇ? ಶಿವಸೇನೆ ಲೇವಡಿ

ಎಲ್ಲರೂ ‘ಭಾಭಿಜಿಯ ಪಾಪಡ್’ ತಿಂದು ಕೋವಿಡ್ ನಿಂದ ಗುಣಮುಖರಾಗಿರುವುದೇ? ಶಿವಸೇನೆ ಲೇವಡಿ

ಹೆಚ್ಚುತ್ತಿರುವ ಕೊರೋನ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿವಸೇನೆಯ ಮೇಲೆ ಮುಗಿಬಿದ್ದ ಕೇಂದ್ರದ  ಬಿಜೆಪಿ ಸರಕಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಸೇನೆಯ ಸಂಜಯ್ ರಾವತ್, ‘ಎಲ್ಲರು ಕೂಡ ‘ಭಾಭಿಜಿ ಪಾಪಡ್’ ತಿಂದು ಕೋವಿಡ್ ನಿಂದ ಗುಣಮುಖವಾಗಿರುವುದೇ? ಎಂದು ಲೇವಡಿ ಮಾಡಿದ್ದಾರೆ.

 ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಂತ್ರಣವು ಸರಕಾರದ ಪರಿಶ್ರಮದ ಫಲವಾಗಿದೆ. ಪಾಪಡ್ ತಿಂದು ರೋಗ ಗುಣಮುಖರಾದವರಿಲ್ಲ, ಕೋವಿಡ್ ವಿರುದ್ಧದ ಹೋರಾಟ ರಾಜಕೀಯವಲ್ಲ ಮತ್ತು ಇದನ್ನು ಮಾನವೀಯವಾಗಿ ಪರಿಗಣಿಸಬೇಕು ಎಂದು ರಾಜ್ಯಸಭಾ ಸಂಸದ ಮತ್ತು ಶಿವಸೇನೆ ವಕ್ತಾರ ಸಂಜಯ್ ರಾವತ್ ಸಂಸತ್ತಿನಲ್ಲಿ ಹೇಳಿದರು.

ಮಹಾರಾಷ್ಟ್ರವು 10 ಲಕ್ಷ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಹೊಂದಿದ್ದ ರಾಜ್ಯವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ತಡೆಗಟ್ಟುವ ಕಾರ್ಯಗಳಿಗಾಗಿ ಮಹಾರಾಷ್ಟ್ರ ಸರಕಾರವನ್ನು ಈಗಾಗಲೇ ಪ್ರಶಂಸಿಸಿದೆ. ಧಾರಾವಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಯಿತು. ಅದರ ಹೊರತು, ಬಿಜೆಪಿ ಸಂಸದರು ಹೇಳಿದಂತೆ ಪಾಪಡ್ ತಿಂದು ಯಾರೂ ಗುಣಮುಖರಾದವರಿಲ್ಲ ಎಂದು ಸಂಜಯ್ ರಾವತ್ ವ್ಯಂಗ್ಯವಾಡಿದರು.

‘ಭಾಭಿಜಿಯ ಪಾಪಡ್’ನಲ್ಲಿ ಕೋವಿಡ್ 19 ವಿರುದ್ಧ ಹೋರಾಡುವ ಶಕ್ತಿ ಇದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಹಿಂದೆ ಹೇಳಿಕೆ ನೀಡಿದ್ದರು. ಇದೀಗ ರಾವತ್ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಲೇವಡಿ ಮಾಡಿದಾರೆ. ಮೇಘವಾಲ್ ಕೂಡ ಕೋವಿಡ್ ಬಾಧಿತರಾಗಿದ್ದು ನಂತರ ಚರ್ಚಾ ವಿಷಯವಾಗಿತ್ತು.

Join Whatsapp
Exit mobile version