Home ಟಾಪ್ ಸುದ್ದಿಗಳು ಲೋಕ ಸಭೆಯಲ್ಲೂ ಶಿವಸೇನೆ ಇಬ್ಭಾಗದತ್ತ

ಲೋಕ ಸಭೆಯಲ್ಲೂ ಶಿವಸೇನೆ ಇಬ್ಭಾಗದತ್ತ

ನವದೆಹಲಿ: 19 ಮಂದಿ ಶಿವಸೇನೆ ಸಂಸದರಲ್ಲಿ 14 ಮಂದಿ ತಮ್ಮನ್ನು ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡುವ ಸನ್ನಾಹದಲ್ಲಿದ್ದಾರೆಂದು ದಿಲ್ಲಿ ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಮೂರನೇ ಎರಡರಷ್ಟು ಶಾಸಕರು ಪ್ರತ್ಯೇಕ ಬಣ ಮಾಡಿಕೊಂಡು ಬಿಜೆಪಿ ಜೊತೆಗೆ ಸರಕಾರ ರಚಿಸಿದ್ದಾರೆ. ಬೃಹನ್ಮುಂಬಯಿ ಮಹಾನಗರ ಪಾಲಿಕೆಯಲ್ಲೂ ಕೆಲವರು ಶಿವಸೇನೆಯಲ್ಲಿ ಒಡಕು ತಂದಿದ್ದಾರೆ. ಈಗ ಲೋಕ ಸಭೆಯಲ್ಲೂ ಶಿವಸೇನೆಯ ಬಹುತೇಕ ಸಂಸದರು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ತಯಾರಾಗಿರುವರು ಎಂದು ತಿಳಿದು ಬಂದಿದೆ.

ಏಕನಾಥ ಶಿಂಧೆ ಬಣದ ಹಿರಿಯ ನಾಯಕರು ಮತ್ತು ಬಿಜೆಪಿಯವರು ಈ ಕೆಲಸವು ಜುಲೈ13- 14ರ ನಡುವೆ ನಡೆಯಲಿದೆ ಎಂದು ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಈ ಗುಂಪು ಎನ್ ಡಿಎ- ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಕೂಟದೊಂದಿಗೆ ಗುರುತಿಸಿಕೊಂಡು ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುರವರಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಲು ತಯಾರಾಗಿದೆ.

“ಅರವಿಂದ ಸಾವಂತ್, ವಿನಾಯಕ ರಾವುತ್, ಗಜಾನನ ಕೀರ್ತಿಕರ್, ಸಂಜಯ್ ಮಾಂಡಲಿಕೆ ಶಿವಸೇನೆ ಒಡೆಯುವ ಸಂಸದ ಬಣದ ಜವಾಬ್ದಾರಿಯನ್ನು ವಹಿಸಿಕೊಂಡಿರುವರು ಎನ್ನಲಾಗಿದೆ. ಇವರೆಲ್ಲ ಉದ್ಧವ್ ಠಾಕ್ರೆಯವರ ಶಿವಸೇನೆಯಿಂದ ದೂರವಾಗಿ ಹೊಸ ಶಿವಸೇನೆ ಬಣದೊಂದಿಗೆ ಗುರುತಿಸಿಕೊಳ್ಳಲು ತಯಾರಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷದ ವಿಪ್ ಇರುವುದಿಲ್ಲವಾದ್ದರಿಂದ ಮುರ್ಮು ಅವರನ್ನು ಬೆಂಬಲಿಸಲು ಪ್ರತ್ಯೇಕ ಬಣವಾಗಿ ತುರ್ತು ಕುಳಿತುಕೊಳ್ಳಬೇಕಾದ ಅಗತ್ಯವೇನೂ ಇಲ್ಲ.” ಎಂದೂ ಶಿವಸೇನೆ ಭಿನ್ನ ಬಣದ ಒಬ್ಬರು ತಿಳಿಸಿದ್ದಾರೆ.

“ಶಾಸಕರು ವಿಭಜನಗೊಂಡ ಮೇಲೆ ಒಟ್ಟಾರೆ ಉದ್ದಕ್ಕೂ ಒಡೆಯುವುದು ಸಹಜ. ಈಗಾಗಲೇ ಥಾಣೆ ಮತ್ತು ನವಿಮುಂಬಯಿ ಕೌನ್ಸಿಲರ್ ಗಳಲ್ಲಿ ಹಲವರು ಏಕನಾಥ ಶಿಂಧೆ ಬಣದ ಜೊತೆಗೆ ಗುರುತಿಸಿಕೊಳ್ಳಲು ತಯಾರಾಗಿದ್ದಾರೆ. ಪೂನಾದಲ್ಲೂ ಅದೇ ಮಾದರಿಯ ದಾರಿ ಕಾದಿದೆ.” ಎಂದು ಕಲ್ಯಾಣದ ಶಿವಸೇನೆ ಸಂಸದರಾದ ಏಕನಾಥ ಶಿಂಧೆಯವರ ಮಗ ಶ್ರೀಕಾಂತ ಶಿಂಧೆ ಹೇಳಿದ್ದಾರೆ.

  ಚುನಾವಣಾ ಆಯೋಗದೆದುರು ನಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸಿ ಬಾಳಾ ಠಾಕ್ರೆ ಕುಟುಂಬದವರಿಂದ ಶಿವಸೇನೆಯ ಚಿಹ್ನೆ, ಬಾವುಟ, ಕಚೇರಿ ಇತ್ಯಾದಿ ಸೆಳೆದುಕೊಳ್ಳುವುದು ಇದರ ಹಿಂದಿರುವ ಉದ್ದೇಶ ಎನ್ನಲಾಗಿದೆ. ಬಿಜೆಪಿಯ ಬೆಂಬಲವಂತೂ ಇದ್ದೇ ಇದೆ. ಪಕ್ಷದ ನಾನಾ ಹುದ್ದೆಗಳಲ್ಲಿರುವವರು ಸಹ ಈ ಬಣದಲ್ಲಿ ಇರುವಂತೆ ನೋಡಿಕೊಂಡರೆ ಇವೆಲ್ಲ ಸುಲಭ.

ಈ ಬಂಡಾಯವನ್ನು ಊಹಿಸಿರುವ ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಶಿಂಧೆ ಬೆಂಬಲಿಗರೆನ್ನುವ ಥಾಣೆ ಸಂಸದ ರಾಜನ್ ವಿಚಾರೆಯವರನ್ನು ಬದಲಿಸಿ ಭಾವನಾ ಗಾವ್ಳಿಯವರನ್ನು ಮುಖ್ಯ ಸಚೇತಕೆಯಾಗಿ ನೇಮಕ ಮಾಡಿದ್ದಾರೆ.

ಇದರ ನಡುವೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ರಾಜ್ಯಪಾಲರು ಹೇಗೆ ಏಕನಾಥ ಶಿಂಧೆಯವರನ್ನು ಸರಕಾರ ರಚಿಸಲು ಆಹ್ವಾನಿಸಿದರು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಅದರ ಒಂದಾದರೂ ತೀರ್ಪು ಬಾರದ ಹೊರತು ಮಹಾರಾಷ್ಟ್ರದ ಸಂಪುಟ ವಿಸ್ತರಣೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version