ಮುಂಬೈ: ಕೊರೊನಾ ವೈರಸ್ ಹಾವಳಿಯ ಬಳಿಕ ಜಗತ್ತಿನೆಲ್ಲೆಡೆ ಜೀವನ ಶೈಲಿಯೇ ಬದಲಾಗಿದೆ. ಮಾಸ್ಕ್ ಹಾಗೂ ಸ್ಯಾನಿಟೈಸರ್’ಗಳು ಜನಸಾಮಾನ್ಯರ ಜೀವನದ ಒಂದು ಭಾಗವೆಂಬತೆ ಪರಿಗಣಿತವಾಗಿದೆ. ಅದರಲ್ಲೂ ಮನೆಯಿಂದ ಹೊರಡುವಾಗ ಮಾಸ್ಕ್’ಅನ್ನು ಮರೆಯದೇ ಧರಿಸುತ್ತಾರೆ.
ಕಳೆದೆರಡು ವರ್ಷಗಳಿಂದ ಎಲ್ಲರ ಮುಖದಲ್ಲೂ ‘ಕಡ್ಡಾಯ’ ಎಂಬಂತೆ ಕಾಣುತ್ತಿರುವ ಮಾಸ್ಕ್’ಅನ್ನು ಧರಿಸಲು ಶಿವಸೇನೆ ಪಕ್ಷದ ನಾಯಕನೋರ್ವ ಪರದಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉತ್ತರಪ್ರದೇಶದ ಗೋರಖ್’ಪುರದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಯೊಂದರಲ್ಲಿ ವೇದಿಕೆಯಲ್ಲಿದ್ದ ಶಿವಸೇನೆ ನಾಯಕನೊಬ್ಬ ಮಾಸ್ಕ್ N-95 ಮಾದರಿಯ ಮಾಸ್ಕ್ ಧರಿಸಲು ಪ್ರಯತ್ನಿಸಿ ಪದೇ ಪದೇ ವಿಫಲರಾಗುತ್ತಿರುವುದು ವೀಡಿಯೋದಲ್ಲಿ ದಾಖಲಿಸಲಾಗಿದೆ. ಆದರೆ ಪಟ್ಟು ಬಿಡದ ನಾಯಕ ಬೇರೊಬ್ಬರ ಸಹಾಯ ಪಡೆದು ಕೊನೆಗೂ ಮಾಸ್ಕ್ ಧರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಸೇನೆ ಪಕ್ಷದ ಸಂಸದ ಧೈರ್ಯಾಶಿಲ್ ಮಾನೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಹಿಂದೆ ಈ ಮಾಸ್ಕ್ ಪ್ರಹಸನ ನಡೆದಿದ್ದು, ನೆಟ್ಟಿಗರು ವಿವಿಧ ‘meme’ಗಳ ಮೂಲಕ ಕಾಲೆಳೆದಿದ್ದಾರೆ.