ಮುಂಬೈ: ಶಿವಸೇನಾ ಪಕ್ಷದ ಬಂಡಾಯ ನಾಯಕ ಏಕನಾಥ ಶಿಂದೆ ಅವರಿಗೆ ಅನಿವಾರ್ಯದಿಂದ ಮುಖ್ಯಮಂತ್ರಿ ಮಾಡಬೇಕಾಯಿತು. ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಭಾರದ ಮನಸ್ಸಿನಿಂದ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಶನಿವಾರ ಹೇಳಿದ್ದಾರೆ.
ರಾಯಗಢ ಜಿಲ್ಲೆಯಲ್ಲಿ ನಡೆದ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷರ ಹೇಳಿಕೆಯು ರಾಜಕೀಯ ವಲಯದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿ ಮಾಡಿದೆ.
ಸ್ಥಿರ ಸರ್ಕಾರ ರಚಿಸುವುದು ಹಾಗೂ ಸ್ಪಷ್ಟವಾದ ಸಂದೇಶ ರವಾನಿಸುವ ಉದ್ದೇಶದೊಂದಿಗೆ ಭಾರದ ಹೃದಯದಿಂದ ದೇವೇಂದ್ರ ಫಡಣವೀಸ್ ಬದಲು ಏಕನಾಥ ಶಿಂದೆ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು ಎಂದು ಪಾಟೀಲ್ ಹೇಳಿದ್ದಾರೆ. ಈ ನೋವನ್ನು ಅರಗಿಸಿಕೊಂಡು ಸಂತೋಷದಿಂದ ಮುಂದಕ್ಕೆ ಹೆಜ್ಜೆ ಇಟ್ಟಿದ್ದೇವೆ ಎಂದೂ ಹೇಳಿದರು.
ಕಳೆದ ತಿಂಗಳು ಅಚ್ಚರಿಯ ನಿರ್ಧಾರ ಕೈಗೊಂಡಿದ್ದ ಬಿಜೆಪಿ, ದೇವೇಂದ್ರ ಫಡ್ನವೀಸ್ ಬದಲು ಏಕನಾಥ ಶಿಂದೆ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ನೂತನ ಸರ್ಕಾರದಲ್ಲಿ ಯಾವುದೇ ಹುದ್ದೆ ನಿರ್ವಹಿಸುವುದಿಲ್ಲ ಎಂದು ಹೇಳಿದ್ದ ಫಡ್ನವೀಸ್ ಅವರು ಬಳಿಕ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಬಿಜೆಪಿ ಮತ್ತು ಬಂಡಾಯ ಶಿವಸೇನಾ ನಾಯಕರ ನಡುವಿನ ಮುಸುಕಿನ ಗುದ್ದಾಟ ಇದೀಗ ಮುನ್ನೆಲೆಗೆ ಬರುತ್ತಿದ್ದು ಇದೀಗ ಪಾಟೀಲ್ ಹೇಳಿಕೆಯು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.