ಶಿವಮೊಗ್ಗ: ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ನೀಡಿದ ತಾಯಿಗೆ ಸಂಕಷ್ಟ ಎದುರಾಗಿದ್ದು, ಶಿವಮೊಗ್ಗದ ಮೂರನೇ ಎಸಿಜೆ ಹಾಗೂ ಜೆಎಂಎಫ್ ಕೋರ್ಟ್ 30,000 ರೂ. ದಂಡ ವಿಧಿಸಿದೆ.
ಜನವರಿ 30ರಂದು ಶಿವಮೊಗ್ಗ ಪೂರ್ವ ಸಂಚಾರ ಠಾಣೆಯ ಪಿಎಸ್‌ಐ ನವೀನ್ ಕುಮಾರ್ ಮಠಪತಿ ಎಸ್.ಪಿ.ಎಂ. ರಸ್ತೆಯ ಕೋಟೆ ಆಂಜನೇಯ ದೇವಾಲಯ ಸಮೀಪ ವಾಹನ ತಪಾಸಣೆ ಮಾಡುವಾಗ 17 ವರ್ಷದ ಬಾಲಕ ಸ್ಕೂಟರ್ ಚಾಲನೆ ಮಾಡುತ್ತಿರುವುದು ಕಂಡು ಬಂದಿತ್ತು. ಪರಿಶೀಲಿಸಿದಾಗ ಸ್ಕೂಟರ್ ಆತನ ತಾಯಿಯ ಹೆಸರಲ್ಲಿ ಇತ್ತು.
ಡಿಎಲ್ ಇಲ್ಲದೆ ಸ್ಕೂಟರ್ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಾಹನದ ಮಾಲೀಕರಾದ ಬಾಲಕನ ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದಾರೆ. ಆರೋಪಪಟ್ಟಿ ಪರಿಶೀಲಿಸಿದ ನ್ಯಾಯಾಧೀಶರು ಬಾಲಕನ ತಾಯಿಗೆ 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.