ಕೊಲ್ಕತಾ : ಮುಂದಿನ ತಿಂಗಳು ಟಿಎಂಸಿಯ 50 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ ಬೆನ್ನಲ್ಲೇ, ಟಿಎಂಸಿ ಸಮಸದೆ ಶತಾಬ್ದಿ ರಾಯ್ ಸಿಎಂ ಮಮತಾ ಬ್ಯಾನರ್ಜಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದ್ದಾರೆ.
ಟಿಎಂಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶತಾಬ್ದಿ ರಾಯ್, ಶನಿವಾರ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಮಾಹಿತಿ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದಾರೆ.
ಶತಾಬ್ದಿ ರಾಯ್ ಫ್ಯಾನ್ಸ್ ಕ್ಲಬ್ ಅಪ್ ಲೋಡ್ ಮಾಡಿದ ಫೇಸ್ ಬುಕ್ ಪೋಸ್ಟ್ ನಲ್ಲಿ, “ಇತ್ತೀಚಿನ ದಿನಗಳಲ್ಲಿ ನಾನು ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗುತ್ತಿರೋದರ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಜನರನ್ನು ತಲುಪಲು ಯತ್ನಿಸುತ್ತಿದ್ದೇನೆ. ಆದರೆ, ನಾನು ಜನರ ಬಳಿ ತಲುಪಬಾರದು ಎಂಬ ಕಾರಣಕ್ಕೆ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿಯನ್ನೇ ನೀಡಲಾಗುತ್ತಿಲ್ಲ. ಆದ್ದರಿಂದ ಈ ಹೊಸ ವರ್ಷದಲ್ಲಿ ನಾನು ಜನರೊಂದಿಗೆ ಸಂಪೂರ್ಣವಾಗಿ ಇರಲು ಬಯಸುತ್ತೇನೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ” ಎಂದು ಬರೆಯಲಾಗಿದೆ.
ಮುಂದಿನ ತಿಂಗಳು 50 ಟಿಎಂಸಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಜ್ಯೋತಿ ಪ್ರಿಯ ಮಲ್ಲಿಕ್, ಮೇ ತಿಂಗಳಲ್ಲಿ ಆರರಿಂದ ಏಳು ಬಿಜೆಪಿ ಸಂಸದರು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದಿದ್ದರು. ಆದರೆ, ಇದೀಗ ಟಿಎಂಸಿ ಸಂಸದರೇ ಪಕ್ಷ ತೊರೆಯುವ ಯೋಚನೆಯಲ್ಲಿರುವ ಹಾಗಿದೆ.