ಗಂಗೊಳ್ಳಿಯಲ್ಲೀಗ ಇರುವುದು ಬಹಿಷ್ಕಾರವಲ್ಲ, ಬೇಸರ!

Prasthutha|

► ಗಂಗೊಳ್ಳಿ ಘಟನೆಯ ಬಗ್ಗೆ ಶಶಿಧರ್ ಹೆಮ್ಮಾಡಿಯವರ ವಿಶ್ಲೇಷಣೆ

- Advertisement -

ನನಗೆ ಹಲವು ಕಾರಣಗಳಿಗೆ ಪ್ರಿಯವಾದ ಊರು. ಅದಕ್ಕೆ ಕಾರಣಗಳು ಹಲವು. ಒಂದು ಅದು ನನ್ನ ಅಮ್ಮ ಹುಟ್ಟಿ ಬೆಳೆದ ಊರು. ನನ್ನಜ್ಜನನ್ನು ನಾನು ನೋಡಿಲ್ಲವಾದರೂ ನಾನು ಗಂಗೊಳ್ಳಿಯಲ್ಲಿ ನೆಲೆಸಿದ್ದ ಹಾಲಾಡಿ ಗೋಪಾಲಕೃಷ್ಣ ಭಟ್ಟರ ಮೊಮ್ಮಗ ಎಂದು ಹೇಳಿಕೊಳ್ಳಲು ನನಗೆ ಈಗಲೂ ಖುಷಿ. ಇನ್ನೊಂದು ನಾನು ಪಿಯು ಕಲಿತದ್ದು ಗಂಗೊಳ್ಳಿಯ ಎಸ್.ವಿ ಕಾಲೇಜಿನಲ್ಲಿ. ಗಂಗೊಳ್ಳಿಯ ಕುರಿತ ಪ್ರೀತಿಗೆ ಮತ್ತೊಂದು ಕಾರಣ ನನ್ನ ಬದುಕಿನ ಮೊದಮೊದಲ ದುಡಿಮೆ ಮಾಡಿದ್ದು ಸಹ ಇದೇ ಗಂಗೊಳ್ಳಿಯಲ್ಲಿ. ಆಗ ಹೆಮ್ಮಾಡಿಯಲ್ಲಿ ಒಬ್ಬರು ದಿನಾಲೂ ಬೆಳಿಗ್ಗೆ ಅಕ್ಕಿ ಶ್ಯಾವಿಗೆ ಮಾಡಿ ಹೊಟೇಲ್‌ಗಳಿಗೆ ಮಾರುತ್ತಿದ್ದರು. ಅವರು ಬೆಳಿಗ್ಗೆ ಬೇಯಿಸಿದ ಶ್ಯಾವಿಗೆಯನ್ನು ಗಂಗೊಳ್ಳಿಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಪ್ರತಿ ದಿನ ನನಗೆ ಐದು ರೂಪಾಯಿ ಕೊಡುತ್ತಿದ್ದರು. ಬೆಳಿಗ್ಗೆ ಐದು ಕಾಲು ಗಂಟೆಗೆ ಬರುತ್ತಿದ್ದ ಸಿಪಿಸಿ ಬಸ್ಸಿನಲ್ಲಿ ಹೆಮ್ಮಾಡಿಯಿಂದ ಹೋಗಿ ಗಂಗೊಳ್ಳಿಯಲ್ಲೊಂದು ಬಾಡಿಗೆ ಸೈಕಲ್ ಪಡೆದು ಬಂದರಿನಿಂದ ಮೇಲ್ ಗಂಗೊಳ್ಳಿಯ ತನಕ ಇದ್ದ ಹೊಟೇಲ್‌ಗಳಿಗೆ ಬಿಸಿಬಿಸಿ ಶ್ಯಾವಿಗೆ ಸಪ್ಲೈ ಮಾಡಿ ಎಂಟುಗಂಟೆಯ ಒಳಗೆ ಮತ್ತೆ ಮನೆಗೆ ಬರುತ್ತಿದ್ದೆ. ಈ ಎಲ್ಲ ಕಾರಣಗಳಿಗೆ ಪ್ರೀತಿಯದ್ದಾಗಿರುವ ಗಂಗೊಳ್ಳಿ ಊರಿನಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ, ಸೌಹಾರ್ದತೆಗೆ ಧಕ್ಕೆ ಬಂದರೆ ನನ್ನ ಮನಸ್ಸು ಮರುಗುತ್ತದೆ.ಗಂಗೊಳ್ಳಿ ತಲೆಮಾರುಗಳಿಂದ ಶಾಂತಿ, ಸಹಬಾಳ್ವೆಗೆ ಹೆಸರಾದ ಊರು. ಊರಿನಲ್ಲಿ ಹಿಂದೂಗಳು ಸಂಖ್ಯೆಯಲ್ಲಿ ಹೆಚ್ಚಿದ್ದಾರೆ. ಮುಸ್ಲಿಮರು, ಕ್ರೈಸ್ತರು ಸಹ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಹಿಂದೂಗಳಲ್ಲಿ ಖಾರ್ವಿ, ಬಿಲ್ಲವ, ದೇವಾಡಿಗ, ದಲಿತ, ಗಾಣಿಗ, ಶೇರೇಗಾರ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಗಳು ಸೇರಿದಂತೆ ಹಲವು ಸಮುದಾಯಗಳ ಜನರು ಇಲ್ಲಿ ಶತಮಾನಗಳಿಂದ ನೆಲೆಸಿದ್ದಾರೆ. ಮೀನುಗಾರಿಕೆ ಈ ಊರಿನ ಜೀವಾಳ. ಜೊತೆಗೆ ಪರದೇಶಗಳಿಂದ ಬರುವ ‘ಮನಿ ಆರ್ಡರ್ ಇಕಾನಮಿ’ ಗಂಗೊಳ್ಳಿಯನ್ನು ಆರ್ಥಿಕವಾಗಿ ಬೆಳೆಸಿದೆ. ಅಡ್ವಾಣಿಯ ರಥಯಾತ್ರೆಯ ಬಳಿಕ ಭಾರತಕ್ಕೆ ತಗಲಿದ ಮುಸ್ಲಿಂ ದ್ವೇಷದ, ಹಿಂದೂತ್ವವಾದಿ ಶಕ್ತಿಗಳ ಕೋಮುವಾದದ ರೋಗ ಗಂಗೊಳ್ಳಿಗೂ ಹಬ್ಬಲು ಹೆಚ್ಚು ಸಮಯ ತಗಲಲಿಲ್ಲ. ನನ್ನ ಪಿಯು ದಿನಗಳ ತನಕವೂ ಶಾಂತಿಯ ತೋಟವಾಗಿದ್ದ ಗಂಗೊಳ್ಳಿ ವರ್ಷಗಳು ಉರುಳಿದಂತೆ ಸಣ್ಣಪುಟ್ಟ ‘ಹಿಂದೂ-ಮುಸ್ಲಿಂ’ ಎಂದು ಕರೆಯಲ್ಪಡುವ ಸಂಘರ್ಷಗಳ ಊರಾಯ್ತು. ರಿಸರ್ವ್ ಪೊಲೀಸ್ ವ್ಯಾನ್‌ಗಳು ಆಗಾಗ ಬಂದು ನಿಲ್ಲುವ ಊರಾಯ್ತು. ಬರುಬರುತ್ತಾ ಗಂಗೊಳ್ಳಿಗೆ ‘ಕೋಮು ಸೂಕ್ಷ್ಮ ಪ್ರದೇಶ’ ಎಂಬ ಟ್ಯಾಗ್ ಕೂಡ ಬಂತು.ಕಳೆದ 2-3, ದಶಕಗಳಲ್ಲಿ ಹಿಂದೂಗಳು ಮುಸ್ಲಿಮರನ್ನು ದ್ವೇಷಿಸುವ ಮನಸ್ಥಿತಿಯನ್ನು ನಿರ್ಮಿಸಲು ಸಂಘಪರಿವಾರ ಗಂಗೊಳ್ಳಿಯಲ್ಲಿ ಸತತವಾಗಿ ಕೆಲಸ ಮಾಡಿದೆ.

ತಮ್ಮಷ್ಟಕ್ಕೆ ತಾವಾಯಿತು, ತಮ್ಮ ಮೀನುಗಾರಿಕೆ ಕಸುಬಾಯಿತು ಎಂದು ಮುಸ್ಲಿಮರು ಮತ್ತು ಕ್ರೈಸ್ತರೊಂದಿಗೆ ಸಹಬಾಳ್ವೆ ನಡೆಸುತ್ತಾ ಬದುಕುತ್ತಿದ್ದ ಮುಗ್ದ ಖಾರ್ವಿ ಸಮುದಾಯದ ಮತ್ತು ಇತರ ಹಿಂದೂ ಸಮುದಾಯಗಳ ಯುವಕರು ಇಲ್ಲಿನ ಕ್ರೈಸ್ತರನ್ನು ಮತ್ತು ಮುಸ್ಲಿಮರನ್ನು ದ್ವೇಷದಿಂದ, ಅಪನಂಬಿಕೆಯಿಂದ ನೋಡುವ ವಾತಾವರಣ ವರ್ಷದಿಂದ ವರ್ಷಕ್ಕೆ ಹೆಚ್ಚುಹೆಚ್ಚು ಗಟ್ಟಿಯಾಗುತ್ತಾ ಬಂತು. ಮುಸ್ಲಿಮರು, ಕ್ರೈಸ್ತರು ನಮ್ಮ ಧರ್ಮದ ಶತ್ರುಗಳು ಎಂಬಂತೆ ಕೋಮುವಾದದ, ಮತೀಯ ದ್ವೇಷದ ವಿಷವನ್ನು ಮುಗ್ದ ಹಿಂದೂಗಳ ಮನಸ್ಸಿನಲ್ಲಿ ತುಂಬಿಸಲಾಯ್ತು. ಅದೆಲ್ಲದರ ಪರಿಣಾಮವೇ ಗಂಗೊಳ್ಳಿಯಲ್ಲಿ ಸದಾ ಈಗ ಬೂದಿ ಮುಚ್ಚಿದ ಕೆಂಡಂದಂತಹ ಸ್ಥಿತಿ. ಯಾವಾಗ ಎಲ್ಲಿ ಏನಾಗುತ್ತದೊ ಎಂದು ಅಲ್ಪಸಂಖ್ಯಾತರು, ವಿಶೇಷವಾಗಿ ಇಲ್ಲಿನ ಮುಸ್ಲಿಮರು ಆತಂಕ ಮತ್ತು ಅಳುಕಿನಿಂದಲೇ ದಿನ ಕಳೆಯಬೇಕಾದ ಸ್ಥಿತಿ. ಮುಸ್ಲಿಮರ ವಿರುದ್ಧ ಸಂಘರ್ಷಕ್ಕೆ, ನಿಂದನೆಗೆ ಕಾರಣ ಭೇಕಾಗಿಲ್ಲ. ಗೋಹತ್ಯೆ, ಮತಾಂತರ ಮುಂತಾದ ನೆಪಗಳಷ್ಟೇ ಸಾಕು. ಗಂಗೊಳ್ಳಿಯ ಇತ್ತೀಚಿನ ಘಟನೆಗಳಿಗೆ ಬರುವ ಮೊದಲು ಹಿಂದಿನ ಒಂದೆರಡು ಘಟನೆಗಳನ್ನು ಸುಮ್ಮನೆ ನೆನಪಿಸಿಕೊಳ್ಳೋಣ. ಗಂಗೊಳ್ಳಿಯಲ್ಲಿ ಒಂದು ಚರ್ಚ್ ಇದೆ. ಸುಮಾರು 400 ವರ್ಷಗಳ ಇತಿಹಾಸವಿರುವ ಚರ್ಚ್ ಅದು. ಚರ್ಚ್‌ನ ವಾರ್ಷಿಕ ಹಬ್ಬ ‘ತೆರಾಲಿ’ಯ ದಿನ (ಮಂಗಳೂರು ಕಡೆಯಲ್ಲಿ ಸಾಂತ್ ಮಾರಿ ಎನ್ನುತ್ತಾರೆ) ಚರ್ಚ್ ಮುಂದಿರುವ ಮೇರಿ ಮಾತೆಯ ಗ್ರೊಟ್ಟೊಗೆ ಹಿಂದೂಗಳು ಸಹ ಬಂದು ಮೊಂಬತ್ತಿ ಬೆಳಗುವ ಸಂಪ್ರದಾಯ ಕರಾವಳಿಯ ಎಲ್ಲೆಡೆಯೂ ಲಾಗಾಯ್ತಿನಿಂದ ಇದೆ. ಅದು ಗಂಗೊಳ್ಳಿಯಲ್ಲೂ ಇದೆ. ಆದರೆ ಕೆಲ ವರ್ಷಗಳ ಹಿಂದೆ ಹಿಂದೂಗಳು ಯಾವುದೇ ಕಾರಣಕ್ಕೂ ತೆರಾಲಿಯ ದಿನ ಚರ್ಚ್‌ಗೆ ಹೋಗಿ ಮೇರಿಮಾತೆಗೆ ಮೊಂಬತ್ತಿ ಬೆಳಗಬಾರದು ಎಂದು ಸಂಘಪರಿವಾರದ ಅಂಗ ಸಂಘಟನೆಯೊಂದು ಬ್ಯಾನರ್ ಮತ್ತು ಕರಪತ್ರಗಳ ಮೂಲಕ ಕರೆ ನೀಡಿತ್ತು. ಆದರೆ ಈ ಕರೆಗೆ ಸೊಪ್ಪು ಹಾಕದ ಜನ ಎಂದಿನಂತೆಯೆ ವರ್ಷಕ್ಕೊಮ್ಮೆ ತೆರಾಲಿಯ ದಿನ ಮೊಂಬತ್ತಿ ಬೆಳಗುವುದನ್ನು ಬಿಟ್ಟಿಲ್ಲ. ಆದರೆ ಈಗಲೂ ಅಲ್ಲಿಗೆ ಹಿಂದೂಗಳು ಹೋಗುವುದನ್ನು ತಡೆಯುವ ಪ್ರಯತ್ನಗಳು ಮಾತ್ರ ಗುಪ್ತವಾಗಿ ನಡೆಯುತ್ತಲೇ ಇವೆ.ಇನ್ನೊಂದು ಪ್ರಮುಖ ಘಟನೆ ನಡೆದಿದ್ದು 2014 ರಲ್ಲಿ. ಗಂಗೊಳ್ಳಿಯ ಜಾಮಿಯಾ ಮಸೀದಿಯ ಕಮರ್ಶಿಯಲ್ ಕಾಂಪ್ಲೆಕ್ಸ್ ಒಂದಕ್ಕೆ ಬೆಂಕಿ ಹಚ್ಚಿದ ಸಂದರ್ಭ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಟ್ಟಡದಲ್ಲಿದ್ದ ಹಲವು ಅಂಗಡಿ ಮುಂಗಟ್ಟು ಕಛೇರಿಗಳಿಗೆ ಅಪಾರ ಹಾನಿಯಾಗಿತ್ತು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಹಿಂದೂ ಜಾಗರಣ ವೇದಿಕೆಯ ಕೆಲವರನ್ನು ಬಂಧಿಸುತ್ತಾರೆ. ಆಗ ಕುಂದಾಪುರದ ಎಎಸ್‌ಪಿ ಆಗಿ ಚಾರ್ಜ್‌ನಲ್ಲಿ ಇದ್ದದ್ದು ಅಣ್ಣಾಮಲೈ. ಅದು ಅಣ್ಣಾಮಲೈ ನಿಜವಾಗಿಯೂ ಸಿಂಗಂ ಆಗಿದ್ದ ದಿನಗಳು. ಬಹುಶಃ ಅದೇ ಅವರ ಕೊನೆಯ ಸಿಂಗಂ ದಿನಗಳು. ಅಣ್ಣಾಮಲೈ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.ಈ ಬಂಧನದ ಬಳಿಕ ರಾತ್ರೋರಾತ್ರಿ ಹಿಂಜಾವೇ ಕಾರ್ಯಕರ್ತರು ಗಂಗೊಳ್ಳಿ ಪೊಲೀಸ್ ಠಾಣೆಗೆ ಘೇರಾವ್ ಮಾಡುತ್ತಾರೆ. ಬೆಳಗಾಗುವುದರೊಳಗೆ ಗಂಗೊಳ್ಳಿ ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಯಿದ್ದ ತ್ರಾಸಿಯ ಸುತ್ತಮುತ್ತ ಭಾರೀ ಕೋಲಾಹಲ ಸೃಷ್ಟಿಯಾಗುತ್ತದೆ. ಮಂಗಳೂರು, ಉಡುಪಿ, ಭಟ್ಕಳ ಮುಂತಾದ ಕಡೆಯಿಂದ ಸಂಘಪರಿವಾರದ ಕಾರ್ಯಕರ್ತರು ಜಮಾಯಿಸುತ್ತಾರೆ. ಅಣ್ಣಾಮಲೈ ಗಂಗೊಳ್ಳಿ ಪೊಲೀಸ್ ಠಾಣೆಯೊಳಗೆ ಇರುವಾಗಲೇ ಸಾವಿರಾರು ಮಂದಿ ಠಾಣೆಯ ಎದುರು ಬೆಳಿಗ್ಗೆಯಿಂದ ಸಂಜೆಯ ವರೆಗೆ ಪ್ರತಿಭಟನೆ ನಡೆಸಿ ಬಂಧಿತರ ಬಿಡುಗಡೆಗೆ ಒತ್ತಡ ತರುತ್ತಾರೆ. ಅದೆಂತಹ ಒತ್ತಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಒಳಗಾಗುತ್ತಾರೆ ಎಂದರೆ ಹಿರಿಯಡ್ಕ ಜೈಲಿಗೆ ರವಾನಿಸಲ್ಪಟ್ಟಿದ್ದ ಆರೋಪಿಯ ಮೇಲಿದ್ದ 307 ಸೆಕ್ಷನ್‌ ಅನ್ನು ತೆಗೆಯುತ್ತಾರೆ. ಆರೋಪಿಯ ಮೇಲೆ ಸರಳ ಮತ್ತು ಜಾಮೀನು ನೀಡಬಹುದಾದ ಸೆಕ್ಷನ್‌ಗಳನ್ನು ಹಾಕುತ್ತಾರೆ. ಅದೇ ದಿನ ರಾತ್ರಿ ಆರೋಪಿಯ ಬಿಡುಗಡೆಯೂ ಆಗಿ ಆರೋಪಿಯನ್ನು 144 ಸೆಕ್ಷನ್ ಇರುವಾಗಲೂ ತ್ರಾಸಿಯಿಂದ ಗಂಗೊಳ್ಳಿಗೆ ಸಹಸ್ರಾರು ಜನರು ಮೆರವಣೆಗೆಯಲ್ಲಿ ಕರೆದೊಯ್ಯುತ್ತಾರೆ. ಕರ್ನಾಟಕದ ಇತಿಹಾಸದಲ್ಲೇ ಇಂಥದ್ದೊಂದು ಉದಾಹರಣೆ ಬೇರೊಂದು ಇರಲಿಕ್ಕಿಲ್ಲ. ಗಂಗೊಳ್ಳಿಯಲ್ಲಿ ಕಾನೂನು ಆ ದಿನ ಆ ಮಟ್ಟಿಗೆ ಸೆಗಣಿ ಹಾಕಿತ್ತು. ಸ್ವತಃ ಅಣ್ಣಾಮಲೈ ಕೂಡ ಆಗ ಇಲಾಖೆಯ ಮೇಲೆ ಬೇಸರಗೊಂಡು ಪತ್ರಕರ್ತರ ಮುಂದೆ ಖಾಸಗಿಯಾಗಿ ತನ್ನ ನೋವನ್ನು ಹೇಳಿಕೊಂಡಿದ್ದರು.

- Advertisement -

ಹಿಂದೂ ಜಾಗರಣ ವೇದಿಕೆ ಮಾತ್ರ ಆ ದಿನ ಯುದ್ಧ ಗೆದ್ದ ಉನ್ಮಾದದಲ್ಲಿತ್ತು. ಗಂಗೊಳ್ಳಿಯ ಬಹುತೇಕ ಘಟನೆಗಳಿಗೆ ಮೂಲ ಕಾರಣ ಸಹ ಇದೇ ಹಿಂದೂ ಜಾಗರಣ ವೇದಿಕೆ.ಈಗ ಮೊನ್ನೆ ನಡೆದ ಘಟನೆಗಳಿಗೆ ಬರೋಣ. ಇತ್ತೀಚೆಗೆ ಗಂಗೊಳ್ಳಿಯಲ್ಲಿ ಒಂದು ವೀಡಿಯೊ ವೈರಲ್ ಆಗುತ್ತದೆ. ಏನಿಲ್ಲವೆಂದರೂ ಹತ್ತು ವರ್ಷಗಳ ಹಿಂದಿನ ವೀಡಿಯೊ ಅದು. ವೀಡಿಯೊದಲ್ಲಿ ಕುರ್ಬಾನಿಗಾಗಿ ಜಾನುವಾರು ಒಂದನ್ನು ವಧೆ ಮಾಡಲಾಗುತ್ತಿರುವ ದೃಶ್ಯವಿತ್ತು. ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಒಂದೆರಡು ಮನೆಗಳಿಗೆ ನುಗ್ಗಿ ಯುವಕರನ್ನು ಬಂಧಿಸುತ್ತಾರೆ. ವಿಚಿತ್ರ ಎಂದರೆ ಪೊಲೀಸರು ಬಂಧಿಸಿದ ಯುವಕರು ಈ ವೀಡಿಯೊ ಚಿತ್ರೀಕರಿಸಿದಾಗ 12, 13 ವಯಸ್ಸಿನವರಾಗಿದ್ದರು. ಪೊಲೀಸರು ಬಂಧಿಸಿದ ಒಬ್ಬನಂತೂ ಆ ವಿಡಿಯೊದಲ್ಲಿ ಇರಲೂ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಆ ಕುರ್ಬಾನಿಯ ದೃಶ್ಯವನ್ನು ಆಗ ಅಲ್ಲಿ ನೋಡುತ್ತಿದ್ದ ಹಲವು ಬಾಲಕರು ಈಗ 20 ರ ವಯಸ್ಸು ದಾಟಿದವರಾಗಿದ್ದಾರೆ. ಅವರನ್ನೂ ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದಾಗ ಆಯಾ ಮಕ್ಕಳ ಹೆತ್ತವರು ಅದನ್ನು ಆಕ್ಷೇಪಿಸುತ್ತಾರೆ. ಎಂದೋ ಎಲ್ಲೋ ಜಾನುವಾರು ಹತ್ಯೆಯೊಂದನ್ನು ನೋಡಿದ ಕಾರಣಕ್ಕೆ ಈಗ ಅವರು ಬದುಕು ಕಟ್ಟಿಕೊಳ್ಳುವ, ಪರ ಊರಿಗೋ, ಪರದೇಶಕ್ಕೋ ಹೋಗಿ ನೌಕರಿ ಹುಡುಕುವ ವಯಸ್ಸಿನಲ್ಲಿ ಹೀಗೆ ಬಂಧಿಸುವುದು ತಪ್ಪು ಎಂದು ಆತಂಕದಲ್ಲಿದ್ದ ಹೆತ್ತವರು ಪೊಳಿಸರೊಂದಿಗೆ ಮಾತಿಗೆ ಇಳಿಯುತ್ತಾರೆ, ಪೊಲೀಸರಿಗೂ ಅದು ಮನವರಿಕೆಯಾಗುತ್ತದೆ. ಆ ವಿಷಯ ಅಲ್ಲಿಗೆ ಮುಗಿಯುತ್ತದೆ. ಆದರೆ ಹಿಂದೂ ಜಾಗರಣ ವೇದಿಕೆಗೆ ಮಾತ್ರ ಈ ವಿಷಯವನ್ನು ಅಲ್ಲಿಗೆ ಮುಗಿಸಲಿಲ್ಲ. ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಕೆರಳಿಸಲಿಕ್ಕೆ ಇದು ಸರಿಯಾದ ಸಮಯ ಎಂದು ಕಾರ್ಯಾಚರಣೆಗೆ ಹಿಂಜಾವೇ ಇಳಿದೇ ಬಿಟ್ಟಿತು.ಗಂಗೊಳ್ಳಿಯಲ್ಲಿ ಗೋಹತ್ಯೆ, ಮತಾಂತರ, ಜಿಹಾದ್ ಎಂದೆಲ್ಲ ಹಿಂಜಾವೆಯೋ ಅಥವಾ ಮತ್ತೊಂದು ಸಂಘಪರಿವರದ ಸಂಘಟನೆಯೊ ಪ್ರತಿಭಟನೆ ಮಾಡುವುದು ಮುಸ್ಲಿಮರಿಗೆ ಆ ಮಗ ಈ ಅಗ ಎಂದು ನಿಂದನೆ ಮಾಡುವುದು ಇದೆಲ್ಲ ಗಂಗೊಳ್ಳಿಯ ಮುಸ್ಲಿಮರಿಗೆ ಹೊಸತೇನಲ್ಲ. ಆದರೆ ಈ ಬಾರಿ ನಡೆದಿದ್ದು ಮಾತ್ರ ಮುಸ್ಲಿಮರ ನೆಮ್ಮದಿಯನ್ನು ಕದಡಿದೆ, ಸಹನೆಯನ್ನು ಕೆಣಕಿದೆ. ಬೇರೆ ಯಾವುದೇ ಊರಿನಲ್ಲಿ ಇಂಥದು ಆಗಿದ್ದರೆ ಏನೆಲ್ಲ ಆಗುತ್ತಿತ್ತೊ ಊಹಿಸಲು ಅಸಾಧ್ಯ. ಮುಸ್ಲಿಮರು ಯಾವ ಮಟ್ಟದಲ್ಲಿ, ಹೇಗೆಲ್ಲ ಪ್ರತಿಭಟನೆ ಮಾಡುತ್ತಿದ್ದರೋ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಆದರೆ ಇಷ್ಟೆಲ್ಲ ಆದರೂ ಗಂಗೊಳ್ಳಿಯ ಮುಸ್ಲಿಮರು ತಾಳ್ಮೆ ಕಳೆದುಕೊಳ್ಳದೆ, ಭಾವೋದ್ರಿಕ್ತರಾಗದೆ ಮೌನಕ್ಕೆ ಶರಣಾಗಿದ್ದಾರೆ, ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಉಕ್ಕಿ ಬರುವ ರೋಷಕ್ಕೆ ಅವರೇ ಸ್ವತಃ ಸಹನೆಯ ಕಟ್ಟೆ ಕಟ್ಟಿದ್ದಾರೆ.ಅಂಥದ್ದೇನಾಯಿತು ಎಂದು ನೀವು ಕೇಳಬಹುದು. ಅಕ್ಟೋಬರ್ 1 ರಂದು ಗೋಹತ್ಯೆಯ ವಿರುದ್ಧ ಎಂಬ ಬ್ಯಾನರ್ ಅಡಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆ ನಡೆಯಿತು. ಎರಡು ಸಾವಿರ ಜನ ಸೇರಿರಬಹುದು. ಆ ವೇಳೆ ಮುಸ್ಲಿಮರ ವಿರುದ್ಧ ಕೂಗಿದ ಘೋಷಣೆಗಳು, ರಂ ಮಗ, ಬೋ ಮಗ, ಸೂ ಮಗ ಎಂಬ ಆ ಬೈಗಳಗಳು, ಆ ನಿಂದನೆ ನಾಗರಿಕನೊಬ್ಬ ಬಾಯಿಯಿಂದ ಹೇಳಲು ಬಿಡಿ, ಕಿವಿಯಿಂದ ಕೇಳಲೂ ಸಹ ಅಸಾಧ್ಯವಾದಷ್ಟು ಅಸಹ್ಯವಾಗಿತ್ತು. ಸನಾತನ ಧರ್ಮ ಎಂದು ಬೀಗುವ ಈ ಮಂದಿಯ ಭಾಷೆ ಮಾತ್ರ ಇಷ್ಟು ನೀಚತನದ್ದೆ ಎಂದು ಯಾವ ಹಿಂದೂ ಕೂಡ ನಾಚಿಕೆಪಡುವಷ್ಟು, ರೇಜಿಗೆ ಹುಟ್ಟುವಷ್ಟು ಕೊಳಕು ಭಾಷೆ ಅದು. ಮುಸ್ಲಿಮರ ವಿರುದ್ಧ ನಿಂದನೆಯೊಂದೇ ಆದರೆ ಅದು ಗಂಗೊಳ್ಳಿಯ ಮುಸ್ಲಿಮರಿಗೆ ಈ ಸಂಘಿಗಳ ಬೈಗಳ ತಾಗದಷ್ಟು ದಪ್ಪಚರ್ಮ ಬೆಳೆದುಬಿಟ್ಟಿದೆ. ಆದರೆ ಅಂದು ಪೈಗಂಬರ್ ಮತ್ತು ಅಲ್ಲಾಹನ ಬಗ್ಗೆ ಅತ್ಯಂತ ನೀಚ ಪದಗಳಲ್ಲಿ ನಿಂದಿಸಿದ್ದು ಮಾತ್ರ ಗಂಗೊಳ್ಳಿಯ ಮುಸ್ಲಿಮರನ್ನು ಹಿಂದೆಂದೂ ಕಂಡು ಕೇಳರಿಯದಂತೆ ಘಾಸಿಗೊಳಿಸಿದೆ.

ತಲ್ಲಣಗೊಳಿಸಿದೆ. ನೀವು ಆ ನಿಂದನೆಯ ವೀಡಿಯೊಗಳನ್ನು ನೋಡಿರಬಹುದು. ಆ ಪದಗಳನ್ನು ಇಲ್ಲಿ ಬಳಸುವುದು ಬಿಡಿ ಅಂತಹ ನಿಂದನೆಯನ್ನು ಸಾವಿರರು ಯುವಕರು, ಹೆಂಗಸರು ಸೇರಿದ ನಾಲ್ಕು ಬೀದಿಗಳಲ್ಲಿ ಘೋಷಣೆಯಾಗಿ ಕೂಗುತ್ತಾರೆ ಎಂದು ಯೋಚಿಸಲು ಸಹ ಅಸಾಧ್ಯ. ದೇಶದ ಬೇರೆ ಎಲ್ಲೇ ಆದರೂ ಮುಸ್ಲಿಮರ ಪ್ರವಾದಿ ಪೈಗಂಬರ್ ಮತ್ತು ಅವರು ಆರಾಧಿಸುವ ಅಲ್ಲಾಹುವಿನ ವಿರುದ್ಧ ಇಷ್ಟು ನೀಚಾತಿನೀಚ ಘೋಷಣೆಗಳನ್ನು ಯಾರೇ ಕೂಗಿದ್ದರೂ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಊಹಿಸಲೂ ಅಸಾಧ್ಯ. ಆದರೆ ಗಂಗೊಳ್ಳಿಯ ಮುಸ್ಲಿಮರು ಈ ನೋವನ್ನು, ಈ ಅವಮಾನವನ್ನು ಸಹಿಸಿಕೊಂಡು ಸುಮ್ಮನಿದ್ದುಬಿಟ್ಟರು. ಗಂಗೊಳ್ಳಿಯ ಮುಸ್ಲಿಮರು ಶಾಂತಿಪ್ರಿಯರು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕಾಗಿಲ್ಲ.ಮೀನು ಮಾರುಕಟ್ಟೆಗೆ ಬಹಿಷ್ಕಾರ ಎಂಬ ವಿಚಾರಕ್ಕೆ ಬರುವ ಮೊದಲು ಗಂಗೊಳ್ಳಿಯ ಮುಸ್ಲಿಮರ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಗಂಗೊಳ್ಳಿಯಲ್ಲಿ ಮುಸ್ಲಿಮರು ನಿನ್ನೆ ಮೊನ್ನೆ ಬಂದು ನೆಲೆಸಿದವರಲ್ಲ. ಈ ಊರಿನಲ್ಲಿ ಮುಸ್ಲಿಮರು ಹಲವು ಶತಮಾನಗಳಿಂದ ನೆಲೆಸಿದ್ದಾರೆ. ಬಹಳ ಘನತೆಯ ಬದುಕನ್ನು ನಡೆಸುತ್ತಿದ್ದಾರೆ. ಎಮ್ ಎಚ್, ನಾಖುದಾ, ಮಾಲಿ, ಬ್ಯಾರಿ, ಮೌಲಾನಾ, ಶಾಬುದ್ದೀನ್ ಹೀಗೆ ಹೆಸರಾಂತ ಮನೆತನಗಳ ದೊಡ್ಡ ಪಟ್ಟಿ ಇದೆ. ಗುಜರಿ ಮಾರುವ ಕಷ್ಟ ಜೀವಿಯಿಂದ ಹಿಡಿದು ಸಾವಿರಾರು ಜನರಿಗೆ ನೌಕರಿ ಕೊಟ್ಟ Manipal Inn ಸಮೂಹದ ಮೌಲಾನಾ ಇಬ್ರಾಹಿಂರಂತಹ ಶ್ರೀಮಂತರೂ ಇಲ್ಲಿನ ಮುಸ್ಲಿಮ್ ಸಮುದಾಯದಲ್ಲಿದ್ದಾರೆ. ಎಲ್ಲರೂ ಇಲ್ಲಿನ ಹಿಂದೂಗಳ ಜೊತೆ ಶಾಂತಿ-ಸಹಬಾಳ್ವೆಯ ಬದುಕು ನಡೆಸುತ್ತಿರುವವರು ಮತ್ತು ಅದನ್ನೇ ಅಪೇಕ್ಷಿಸುವವರು. ಊರಿನ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆ ಕಡಿಮೆಯೇನಿಲ್ಲ. ಗಲ್ಫ್‌ನಲ್ಲಿ ದುಡಿವ ಮುಸ್ಲಿಮರು ಇಲ್ಲಿನ ಆರ್ಥಿಕತೆಗೆ ಕೊಡುಗೆ ನೀಡುತ್ತಾ ಜೊತೆಗೆ ತಮ್ಮ ಊರಿನ ಅನೇಕ ಹಿಂದೂ ಸಹೋದರರನ್ನೂ ಗಲ್ಫ್‌ಗೆ ಕರೆದು ಉದ್ಯೋಗ ಕೊಡಿಸಿ ಅವರ ಬದುಕನ್ನೂ ಹಸನಾಗಿಸಿದ್ದಾರೆ. ಕೇವಲ ಮೌಲಾನಾ ಇಬ್ರಾಹಿಂ ಒಬ್ಬರನ್ನೇ ತೆಗೆದುಕೊಳ್ಳಿ. ಎಷ್ಟು ಜನರಿಗೆ ಜಾತಿಮತ ನೋಡದೆ ಮದುವೆಗಳಿಗೆ, ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡಿದ್ದಾರೆ, ಎಷ್ಟೊಂದು ಜನರಿಗೆ ನೌಕರಿ ಕೊಟ್ಟಿದ್ದಾರೆ. ಕಳೆದ ಕೋವಿಡ್ ಲಾಕ್ ಡೌನ್‌ಗಳ ಸಂದರ್ಭದಲ್ಲಿ ಕೋವಿಡ್ ಕಿಟ್‌ಗಳನ್ನು ಇಲ್ಲಿನ ಮುಸ್ಲಿಂ ಸಂಘಟನೆಗಳು ಎಷ್ಟೊಂದು ಹಿಂದೂಗಳ ಮನೆಮನೆಗೆ ತಲುಪಿಸಿಲ್ಲ? ಇಷ್ಟು ಮನುಷ್ಯ ಸಹಜವಾಗಿ ಬದುಕುತ್ತಿರುವ ಗಂಗೊಳ್ಳಿಯ ಮುಸ್ಲಿಮರು ಗಂಗೊಳ್ಳಿಯಲ್ಲಿ ಆಗುವ ಎಲ್ಲದಕ್ಕೂ ಸಮುದಾಯಕ್ಕೆ ಸಮುದಾಯವೇ ಹೊಣೆಯಾಗುವುದು ಹೇಗೆ?ಹೌದಪ್ಪಾ, ಮುಸ್ಲಿಮರೆಲ್ಲ ಭಾರೀ ಒಳ್ಳೆಯವರು, ಕಿಡಿಗೇಡಿಗಳೇ ಇಲ್ಲ ಬಿಡಿ ಅವರಲ್ಲಿ ಎಂದು ನೀವು ನನ್ನನ್ನು ತಮಾಷೆ ಮಾಡಬಹುದು. ಕಿಡಿಗೇಡಿಗಳು ಯಾವ ಮತದಲ್ಲಿಲ್ಲ? ಯಾವ ಜಾತಿಯಲ್ಲಿಲ್ಲ? ಮುಸ್ಲಿಮರಲ್ಲೂ ಕಿಡಿಗೇಡಿಗಳು ಖಂಡಿತ ಇದ್ದಾರೆ. ಊರಿನ ನೆಮ್ಮದಿಗೆ ಭಂಗ ತರುವಲ್ಲಿ ಆ ಕಿಡಿಗೇಡಿಗಳ ಪಾತ್ರವೂ ಇದೆ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಒಂದು ಪ್ರಶ್ನೆ. ಗಂಗೊಳ್ಳಿಯ ಹಿಂದೂಗಳಲ್ಲಿ ವಿವಿಧ ಜಾತಿ ಪಂಗಡಗಳ, ಸಮುದಾಯಗಳ ಕಿಡಿಗೇಡಿಗಳು ತಪ್ಪು ಮಾಡಿದಾಗ, ಅಪರಾಧ ಮಾಡಿದಾಗ ಸಮುದಾಯಕ್ಕೆ ಸಮುದಾಯವನ್ನೇ ಹೊಣೆ ಮಾಡಿದ್ದು ಎಂದಾದರೂ ಇದೆಯೆ? ಇಲ್ಲ. ಹಾಗಾದರೆ ಗಂಗೊಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಕಿಡಿಗೇಡಿಗಳು ನಡೆಸುವ ಕೃತ್ಯಗಳಿಗೆ, ತಮ್ಮ ಆದಾಯಕ್ಕೊ, ಖರ್ಚಿಗೊ ಅಕ್ರಮ ಗೋಸಾಗಾಟವೊ, ಅಕ್ರಮ ಕಾಸಾಯಿಖಾನೆಯನ್ನೋ ಮಾಡಿಕೊಂಡಿದ್ದರೆ ಊರಿನ ಎಲ್ಲ ಮುಸ್ಲಿಮರು ಹೇಗೆ ಅದರಲ್ಲಿ ಪಾಲುದಾರರಾಗುತ್ತಾರೆ? ಅಕ್ರಮ ಮಾಡಿದವರನ್ನು, ತಪ್ಪು ಮಾಡಿದವರನ್ನು ಶಿಕ್ಷಿಸಲು ಕಾನೂನು ಈ ದೇಶದಲ್ಲಿ ಇದೆಯಲ್ಲವೆ? ಗಂಗೊಳ್ಳಿ ಎಂಬ ಊರಿಗೂ ಅದು ಅನ್ವಯಿಸುತ್ತದೆಯಲ್ಲವೆ? ಮತ್ಯಾಕೆ ಮುಸ್ಲಿಮರ ಮೇಲೆ ಈ ಪರಿಯ ದ್ವೇಷ?ಇನ್ನು ಮೀನು ಮಾರುಕಟ್ಟೆಗೆ ಬಹಿಷ್ಕಾರದ ವಿಚಾರ. ಪತ್ರಿಕೆಗಳಲ್ಲಿ, ಟಿವಿ ಚಾನಲ್‌ಗಳಲ್ಲಿ ಗಂಗೊಳ್ಳಿಯ ಇಡೀ ಮುಸ್ಲಿಮ್ ಸಮುದಾಯವೇ ಮೀನು ಮಾರುಕಟ್ಟೆಗೆ ಬಹಿಷ್ಕಾರ ಹಾಕುವಂತೆ ಕರೆ ಕೊಟ್ಟಿರುವ ಹಾಗೆ ವರದಿಗಳು ಬರುತ್ತಿವೆ. ಮೊನ್ನೆ ಒಂದು ಮಾಧ್ಯಮವಂತೂ ‘ಗೋ ಹತ್ಯೆ ವಿರೋಧಿಸಿದ್ದಕ್ಕೆ ಮೀನು ಮಾರುಕಟ್ಟೆಗೆ ಬಹಿಷ್ಕಾರ’ ಎಂದು ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದೆ. ಇದು ಜನರ ದಿಕ್ಕುತಪ್ಪಿಸುವ ವರದಿಗಳು. ಗಂಗೊಳ್ಳಿಯಲ್ಲಿ ಹಿಂಜಾವೇ ಪ್ರತಿಭಟನೆಯಲ್ಲಿ ಅಲ್ಲಾಹು, ಪೈಗಂಬರ್ ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ಕೂಗಿದ ಘೋಷಣೆಗಳ ವೀಡಿಯೊ ನೋಡಿದವನು ಇಂತಹ ವರದಿಗಳನ್ನು ಮಾಡಲಾರ. ಗೋಹತ್ಯೆಗೂ ಇಲ್ಲಿ ನಡೆಯುತ್ತಿರುವುದಕ್ಕೂ ಯಾವ ಸಂಬಂಧವೂ ಇಲ್ಲ. ಗಂಗೊಳ್ಳಿಯ ಯಾವುದೇ ಜಮಾತ್, ಮಸೀದಿ ಅಥವಾ ಯಾವುದೇ ಮುಸ್ಲಿಂ ಸಂಘಟನೆಗಳು ಸಾರಾಸಗಟಾಗಿ ಮೀನು ಮಾರುಕಟ್ಟೆಗೆ ಬಹಿಷ್ಕಾರ ಹಾಕಿ ಎಂದು ಎಲ್ಲಿಯೂ ಕರೆಕೊಟ್ಟಿಲ್ಲ. ಹಾಗಾದರೆ ಮುಸ್ಲಿಮರು ಗಂಗೊಳ್ಳಿಯ ಮಾರುಕಟ್ಟೆಗೆ ಮೀನು ಖರೀದಿಸಲು ಹಿಂದಿನಂತೆಯೆ ಹೋಗುತ್ತಿದ್ದಾರಾ? ಇಲ್ಲ. ಹಿಂದಿನ ಹಾಗೆ ಅವರು ಈಗ ಅಲ್ಲಿಗೆ ಹೋಗುತ್ತಿಲ್ಲ. ಹಾಗಾದರೆ ಇದು ಬಹಿಷ್ಕಾರವಲ್ಲವೆ ಎಂದು ನೀವು ಕೇಳಬಹುದು. No, ಇದು ಬಹಿಷ್ಕಾರವಲ್ಲ. ಬೇಸರ. ಎದೆಯ ಗೂಡೊಳಗೆ ಒಂದಿಂಚು ಮಾನವೀಯತೆಯಾದರೂ ಉಳಿಸಿಕೊಂಡಿರುವವರಿಗೆ ಈ ಬೇಸರ ಅರ್ಥ ಆಗುತ್ತದೆ.ಮುಸ್ಲಿಮರು ಮೀನುಪ್ರಿಯರು. ನಿತ್ಯವೂ ಗಂಗೊಳ್ಳಿಯ ಮುಸ್ಲಿಮರು ಗಂಗೊಳ್ಳಿಯ ಮಾರುಕಟ್ಟೆಗೆ ಹೋಗುತ್ತಾರೆ. ಅಲ್ಲಿ ವರ್ಷಗಳಿಂದ ಮೀನುಮಾರುವ ವನಜಕ್ಕನೊ, ಸೀತಕ್ಕನೊ, ಚಿತ್ರಮ್ಮನೊ, ಸಾಕಮ್ಮನೊ (ಹೆಸರುಗಳು ಸುಮ್ಮನೆ ಈ ಲೇಖನಕ್ಕಾಗಿ ಮಾತ್ರ) ಮೀನು ಖರೀದಿಸುವ ಮುಸ್ಲಿಮರಿಗೆ ಅಕ್ಕತಂಗಿಯರಂತೆ ಅಚ್ಚುಮೆಚ್ಚಿನವರು. ಅವರೊಂದಿಗೆ ಅವರದೇ ಭಾಷೆ ಕೊಂಕಣಿಯಲ್ಲಿ ಹರಟೆ ಹೊಡೆಯುತ್ತಾ, ಚೌಕಾಸಿ ಮಾಡುತ್ತಾ, ತಮಾಷೆ ಮಾಡುತ್ತಾ ಅಗ್ಗದ ಮೀನಿನಿಂದ ಹಿಡಿದು ತೀರಾ ದುಬಾರಿ ಮೀನಿನ ತನಕ ವಿವಿಧ ಜಾತಿಯ ಮೀನುಗಳನ್ನು ಮುಸ್ಲಿಮರು ಖರೀದಿಸಿ ತರುವವರು. ಇದು ಕಾಸು ಕೊಟ್ಟು ಮೀನು ಖರೀದಿಸುವ ವ್ಯವಹಾರವಾದರೂ ಅದರಾಚೆಗೆ ಅದೊಂದು ಕೌಟುಂಬಿಕ ಬಾಂಧವ್ಯದಂತಹ ಸಲುಗೆಯ ಸಂಬಂಧ. ಹೀಗೆ ಅಕ್ಕ-ತಂಗಿಯರಂತೆ ಇದ್ದ ಮೀನು ಮಾರುವ ಮಹಿಳೆಯರಲ್ಲಿ ಹಲವರು ಅಕ್ಟೋಬರ್ 1 ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಾಲ್ಗೊಳ್ಳುವುದು ಅವರ ಹಕ್ಕು. ಅದು ನಿಜವೂ ಹೌದು. ಆದರೆ ಇದೇ ಪ್ರತಿಭಟನೆಯಲ್ಲಿ ಇಲ್ಲಿನ ಮುಸ್ಲಿಮರ ವಿರುದ್ಧ, ಪೈಗಂಬರ್ ಮತ್ತು ಅಲ್ಲಾಹನ ನಿಂದನೆಯ ಘೋಷಣೆಗಳನ್ನು ಕೂಗುವಾಗಲೂ ಈ ಮಹಿಳೆಯರೂ ಸಾಥ್ ನೀಡಿದ್ದಾರೆ ಎಂಬುದು ಇಲ್ಲಿನ ಮುಸ್ಲಿಮರ ಆರೋಪ.

ಇತ್ತೀಚೆಗೆ ಮಂಗಳೂರಿನ ‘ಸನ್ಮಾರ್ಗ’ ಮಾಧ್ಯಮ ತಂಡ ಗಂಗೊಳ್ಳಿಯ ಮೀನು ಮಾರುಕಟ್ಟೆಯ ಹೆಂಗಸರನ್ನು ಮಾತನಾಡಿಸಿದಾಗಲೂ ಗಂಗೊಳ್ಳಿಯ ಮುಸ್ಲಿಮರ ವಿರುದ್ಧ ನಡೆಸಿದ ಪ್ರತಿಭಟನೆಯನ್ನು ಆ ಹೆಂಗಸರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಮಾತ್ರವಲ್ಲ ‘ನಮ್ಮದೇನೂ ತಪ್ಪಿಲ್ಲ, ಮುಸ್ಲಿಮರು ಸರಿಯಾಗಬೇಕು’ ಎಂದು ಒಂದಿಬ್ಬರು ಮಹಿಳೆಯರು ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ಮಾತನಾಡುತ್ತಾರೆ. ‘ನಾವೇನು ಅವರನ್ನೇ ನಂಬಿಕೊಂಡು ಮೀನು ಮಾರಾಟ ಮಾಡುತ್ತಿದ್ದೇವಾ’ ಎಂದೂ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಮೀನು ಮಾರುವ ಈ ಮುಗ್ದ ಹೆಂಗಸರ ಮನಸ್ಸಿನಲ್ಲೂ ಸಂಘಪರಿವಾರದ ಮಹಿಳಾ ವಾಹಿನಿಗಳು ಮುಸ್ಲಿಂ ದ್ವೇಷ ತುಂಬಿಸಲು ಯಶಸ್ವಿಯಾಗಿವೆ ಎನ್ನುವುದಕ್ಕೆ ‘ಸನ್ಮಾರ್ಗ’ದ ವರದಿ ಸಾಕ್ಷಿ.ನಿತ್ಯವೂ ನಮ್ಮೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ಮೀನು ಮಾರುವ ಅಕ್ಕಂದಿರು ಕೂಡ ನಮ್ಮ ವಿರುದ್ಧ ಹೀಗೆ ಕಾರಣವಿಲ್ಲದೆ ಮಾತನಾಡುತ್ತಾರಲ್ಲ, ನಮ್ಮನ್ನು ಹೀಗೆ ದ್ವೇಷಿಸಲು ಶುರು ಮಾಡಿದ್ದಾರಲ್ಲ ಎಂಬ ಬೇಸರ ಗಂಗೊಳ್ಳಿಯ ಮುಸ್ಲಿಮರಿಗೆ ಖಂಡಿತವಾಗಿಯೂ ಇದೆ. ‘ಮೈ ಜಿಸ್‌ಕೆ ಹಾಥ್ ಮೇ ಇಕ್ ಫೂಲ್ ದೇಕೆ ಆಯಾ ಥಾ, ಉಸೀ ಕೆ ಹಾಥ್ ಕಾ ಪತ್ತರ್ ಮೇರಿ ತಲಾಶ್ ಮೆ ಹೈ’ ಎಂಬಂತಾಗಿದೆ ಗಂಗೊಳ್ಳಿಯ ಮುಸ್ಲಿಮರ ಪರಿಸ್ಥಿತಿ.ಇದು ಮುಸಲ್ಮಾನರು ಹಾಕಿದ ಬಹಿಷ್ಕಾರವಲ್ಲ. ಅವರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿರುವ ರೀತಿ ಅಷ್ಟೆ. ಮತ್ತೊಮ್ಮೆ ಹೇಳುತ್ತಿದ್ದೇನೆ, ಇದು ಬಹಿಷ್ಕಾರವಲ್ಲ, ಬೇಸರ. ಅಷ್ಟೇ. ಆಗಾಗ ಘಾಸಿಗೊಳ್ಳುತ್ತಿರುವ ಗಂಗೊಳ್ಳಿಯ ಮುಸ್ಲಿಮರಿಗೆ ಈ ಬಾರಿಯ ಗಾಯ ಸ್ವಲ್ಪ ಆಳದ್ದು. ವಾಸಿಯಾಗಲು ಸ್ವಲ್ಪ ಸಮಯ ಬೇಕು. ಎಲ್ಲವೂ ಬೇಗ ಸರಿಯಾಗುತ್ತದೆ ಎಂದು ಗಂಗೊಳ್ಳಿಯ ಮುಸ್ಲಿಮರೇ ಹೇಳುತ್ತಾರೆ. ಅವರೆಲ್ಲ ಬಯಸುವುದು ಸಹಬಾಳ್ವೆ, ಸೌಹಾರ್ದ ಮತ್ತು ಸ್ನೇಹ. ‘ಗೆಹರೇ ಝಕ್ಮೋಂ ಕೊ ಭರನೆ ಮೆ ವಕ್ತ್ ತೊ ಲಗ್ತಾ ಹೈ. ಗಂಗೊಳ್ಳಿಯ ಹಿಂದೂ, ಮುಸ್ಲಿಂ ಎರಡೂ ಸಮುದಾಯದ ಹಿರಿಯರು ಈಗ ಅಖಾಡಾಕ್ಕೆ ಬರಬೇಕು. ಈ ಅಪನಂಬಿಕೆ, ಅಪಪ್ರಚಾರ, ಅವಿಶ್ವಾಸಗಳನ್ನು ತೊಡೆದು ಹಾಕಲು ಮಾತುಕತೆಗಳನ್ನು ನಡೆಸಬೇಕು. ಯುವಕರನ್ನು ಕರೆದು ಬುದ್ದಿಮಾತು ಹೇಳಬೇಕು. ಕಿಡಿಗೇಡಿಗಳನ್ನು ಊರುಬಿಡಿಸಬೇಕು. ಸಹಬಾಳ್ವೆ-ಸೌಹಾರ್ದತೆ ಗಂಗೊಳ್ಳಿಯ ಸಹಜ ಗುಣ. ಗಂಗೊಳ್ಳಿ ಮತ್ತೆ ಹಿಂದಿನಂತೆ ಶಾಂತಿಯ ಸ್ನೇಹದ ತೋಟವಾಗಿಸಲು ಗಂಗೊಳ್ಳಿಯ ಹಿರಿಯರು, ಪ್ರಜ್ಞಾವಂತ ಯುವಕರು, ತಾಯಂದಿರು ಮುಂದಾಗಬೇಕು. ಈ ಸಲದ ನೋವನ್ನೂ, ಬೇಸರವನ್ನೂ ಗಂಗೊಳ್ಳಿಯ ಮುಸ್ಲಿಮರು ಖಂಡಿತ ಮರೆಯುತ್ತಾರೆ. ಗಂಗೊಳ್ಳಿಯ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಸೀತಕ್ಕ ಮತ್ತು ಮೊಯ್ದೀನ್ ಸಾಯ್ಬರ ನಡುವಿನ ಸಲುಗೆಯ ಕಷ್ಟ ಸುಖದ ಮಾತುಗಳು, ಆ ಚೌಕಾಸಿ, ಮೀನು ಖರೀದಿಯ ಆ ಎಲ್ಲ ಹಳೆಯ ದೃಶ್ಯಗಳೂ ಮತ್ತೆ ಕಾಲದ ಪರದೆಯಲ್ಲಿ ರೀಪ್ಲೇ ಆಗಲಿವೆ. ಮುಸ್ಲಿಮ್ ಮತ್ತು ಖಾರ್ವಿ ಸಮುದಾಯಗಳ ನಡುವಿನ ಭ್ರಾತೃತ್ವ, ಸ್ನೇಹ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಿ ಗಂಗೊಳ್ಳಿಯ ಮೀನು ಮಾರುಕಟ್ಟೆ ಕೈರಂಪಣಿ ಬಲೆಯಲ್ಲಿ ಸಿಕ್ಕ ಬಂಗುಡೆ ಮೀನಿನ ಕಣ್ಣುಗಳಂತೆ ಮಿನುಗಲಿದೆ, ಕಂಗೊಳಿಸಲಿದೆ.This too shall pass..

Join Whatsapp
Exit mobile version