ನಾಗ್ಪುರ: ಅನಿಲ್ ದೇಶಮುಖ್ ಅವರನ್ನು ಜೈಲಿಗೆ ತಳ್ಳಿದವರು ಅದರ ಪರಿಣಾಮ ಅನುಭವಿಸಲಿದ್ದಾರೆ ಎಂದು NCP ನಾಯಕ ಶರದ್ ಪವಾರ್ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಅನಿಲ್ ದೇಶಮುಖ್ ಮಾಡಿದ ಅಪರಾಧವೇನು? ಅನಿಲ್ ವಿರುದ್ಧ ದೂರು ನೀಡಿದ್ದ ಪರಂಬೀರ್ ಸಿಂಗ್ ನನ್ನನ್ನು ಒಮ್ಮೆ ಭೇಟಿಯಾಗಲು ಬಂದಿದ್ದರು. ಆಗ ಅವರು ಅನಿಲ್ ದೇಶಮುಖ್ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಿದ್ದೇನೆ ಎಂದರು. ಏಕೆ ಎಂದು ಪ್ರಶ್ನಿಸಿದಾಗ ಅನಿಲ್ ಹಣ ವಸೂಲಿ ಮಾಡುವಂತೆ ಸೂಚಿಸಿದರೂ ನಾನು ಪಾಲಿಸಲಿಲ್ಲ ಎಂದು ಹೇಳಿದ್ದಾರೆ. ಅನಿಲ್ ಅವರ ಸೂಚನೆಯನ್ನು ಪಾಲಿಸದಿದ್ದರೆ ಅವರು ತಪ್ಪಿತಸ್ಥರಾಗುವುದು ಹೇಗೆ?” ಎಂದು ಪವಾರ್ ಪ್ರಶ್ನಿಸಿದ್ದಾರೆ.
ನಾವು ಮೌನವಾಗಿದ್ದೇವೆ ಎಂದು ನೀವು ಭಾವಿಸಬೇಡಿ. ಅವರು ಜೈಲಿನಲ್ಲಿರುವ ಪ್ರತಿ ಗಂಟೆಗೂ, ಪ್ರತಿದಿನಕ್ಕೂ ನೀವು ಬೆಲೆ ತೆರಬೆಕಾದೀತು ಎಂದು ಪವಾರ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಡಿಯಿಂದ ಬಂಧನಕ್ಕೊಳಗಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.