ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಕ್ಬಾಲ್ ವಿವಾಹವನ್ನು ಲವ್ ಜಿಹಾದ್ ಎಂದು ಕೆಲವರು ಟೀಕೆ ಮಾಡುತ್ತಿದ್ದು, ಈ ಕುರಿತು ಶಕ್ತಿಮಾನ್ ಖ್ಯಾತಿಯ ನಟ ಮುಖೇಶ್ ಖನ್ನಾ ಪ್ರತಿಕ್ರಿಯಿಸಿದ್ದಾರೆ. ಈ ಮದುವೆಯನ್ನು ಲವ್ ಜಿಹಾದ್ ಕರೆಯುವುದು ಸರಿಯಲ್ಲ. ಮದುವೆಯಾದವರಿಗೆ ಇಲ್ಲದ ಸಮಸ್ಯೆ ಕೆಲವರಿಗಾಗಿದೆ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಖೇಶ್ ಖನ್ನಾ, ಸೋನಾಕ್ಷಿ ಹಾಗೂ ಝಹೀರ್ ಮದುವೆಯನ್ನು ಹಿಂದು-ಮುಸ್ಲಿಂ ದೃಷ್ಟಿಯಲ್ಲಿ ನೋಡಬೇಡಿ. ಸೋನಾಕ್ಷಿ ಸಡನ್ ಆಗಿ ಈ ನಿರ್ಧಾರ ತೆಗೆದುಕೊಳ್ಳಲಿಲ್ಲ. ಅವರು ಮದುವೆ ಆಗುವುದಕ್ಕೂ ಮುನ್ನ 6-7 ವರ್ಷಗಳ ಕಾಲ ಜೊತೆಯಾಗಿ ವಾಸಿಸಿದ್ದಾರೆ. ಜನರು ಇದನ್ನು ಲವ್ ಜಿಹಾದ್ ಎನ್ನುತ್ತಿದ್ದಾರೆ. ಬಲವಂತವಾಗಿ ಹುಡುಗಿಯ ಮದುವೆ ಮಾಡಿಸಿದರೆ ಅದು ಲವ್ ಜಿಹಾದ್ ಆಗುತ್ತದೆಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
ಹಿಂದು ಮತ್ತು ಮುಸ್ಲಿಂ ಮದುವೆ ಆಗಬಾರದೇ? ನಮ್ಮ ಕಾಲದಲ್ಲಿ ಅನೇಕರು ಈ ರೀತಿ ಮದುವೆ ಆಗಿದ್ದಾರೆ ಹಾಗೂ ಅವರು ಖುಷಿಯಾಗಿ ಇದ್ದಾರೆ. ಈ ಮದುವೆ ಅವರ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ ಎಂದಿದ್ದಾರೆ.