ಬೆಂಗಳೂರು: ನಗರದಲ್ಲಿ ಮತ್ತೆ ಮಧ್ಯರಾತ್ರಿಯವರೆಗೆ ಮದ್ಯ, ಡ್ರಗ್ಸ್ ಸೇವನೆಯ ಮೋಜು ಮಸ್ತಿಯ ಪಾರ್ಟಿಗಳು ಸದ್ದು ಮಾಡುತ್ತಿವೆ.
ಕೊರೊನಾ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಮದ್ಯ ಡ್ರಗ್ಸ್ ಪಾರ್ಟಿಗಳು ಕಡಿಮೆಯಾಗಿದ್ದು ಕೆಲದಿನಗಳಿಂದ ಮತ್ತೆ ಸದ್ದು ಮಾಡತೊಡಗಿವೆ.
ಹಲಸೂರಿನ ಜಿ.ಟಿ ಮಾಲ್ ಬಳಿಯ ಪಾರ್ಕ್ ಪಂಚತಾರಾ ಹೊಟೇಲ್ ನಲ್ಲಿ ನಿನ್ನೆ ತಡರಾತ್ರಿವರೆಗೆ ಪಾರ್ಟಿ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಶಕ್ತಿ ಕಪೂರ್ ಅವರ ಪುತ್ರ ಹಾಗೂ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಾಗ ಹಿಡಿದು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಯಿತು.
ವೈದ್ಯಕೀಯ ತಪಾಸಣೆಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಆತನನ್ನು ಹಲಸೂರು ಪೊಲೀಸರು ಠಾಣೆಗೆ ಕರೆದೊಯ್ದು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಜಿ.ಟಿ ಮಾಲ್ ಬಳಿಯ ಪಾರ್ಕ್ ಹೋಟೆಲ್ ನಲ್ಲಿ ತಡರಾತ್ರಿಯವರೆಗೆ ಪಾರ್ಟಿ ನಡೆಸುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ರಾತ್ರಿ 12ರ ವೇಳೆ ಹಲಸೂರು ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದಾರೆ.
ಪಾರ್ಟಿಯಲ್ಲಿ ಮದ್ಯ ಮೋಜು ಮಸ್ತಿಯ ಜೊತೆಗೆ 50ಕ್ಕೂ ಹೆಚ್ಚು ಯುವಕ ಮತ್ತು ಯುವತಿಯರನ್ನು ಡ್ರಗ್ಸ್ ಸೇವನೆ ಮಾಡುತ್ತಾ ಮನಸೋಇಚ್ಛೆ ಕುಣಿಯುತ್ತಿರುವುದು ಕಂಡು ಬಂದು ಅವರನ್ನೆಲ್ಲಾ ವಶಕ್ಕೆ ತೆಗೆದುಕೊಳ್ಳಲಾಯಿತು.
ವಶಕ್ಕೆ ಪಡೆದ 50 ಮಂದಿಯನ್ನು ಮೂರು ಟಿಟಿ ವಾಹನದಲ್ಲಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದರು.
ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ 50 ಮಂದಿಯಲ್ಲಿ 10ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಧೃಡಪಟ್ಟಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.