ತಿರುವನಂತಪುರಂ : ಕೇರಳದಲ್ಲಿ ಆರೋಗ್ಯ ಸಚಿವೆಯಾಗಿ ಭಾರೀ ಸುದ್ದಿಯಲ್ಲಿದ್ದ ಮಾಜಿ ಸಚಿವೆ, ಸಿಪಿಎಂ ನಾಯಕಿ ಶೈಲಜಾ ಟೀಚರ್ ಗೆ ಸೆಂಟ್ರಲ್ ಯುರೋಪಿಯನ್ ಯುನಿವರ್ಸಿಟಿಯ ʼಓಪನ್ ಸೊಸೈಟಿ ಪ್ರೈಝ್ʼ ಪುರಸ್ಕಾರ ಲಭಿಸಿದೆ. ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಲಾಗಿದೆ.
ಸಾರ್ವಜನಿಕ ಆರೋಗ್ಯಕ್ಕಾಗಿ ತಮ್ಮ ಸೇವೆ ಮತ್ತು ಕೇರಳದಲ್ಲಿ ಕೋವಿಡ್ ಸಾಂಕ್ರಾಮಿಕ ಸಂಕಷ್ಟವನ್ನು ನಿರ್ವಹಿಸಿದ ರೀತಿಗೆ ಈ ಪುರಸ್ಕಾರ ಬಂದಿದೆ. ರಾಜ್ಯದಲ್ಲಿ ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿರ್ವಹಿಸಿದ್ದ ಬಗ್ಗೆ ಶೈಲಜಾ ಟೀಚರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದರು.
ಮುಕ್ತ ಸಮಾಜದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆ ಸಲ್ಲಿಸುವವರಿಗೆ ಈ ಅಂತಾರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತದೆ. ವಿಶ್ವವಿದ್ಯಾಲಯದ ಅಧ್ಯಕ್ಷ ಮೈಕಲ್ ಇಗ್ನಾಟೀಫ್ ಕೋವಿಡ್ ನಿರ್ವಹಣೆಯಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ಸ್ಮರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.