ಮಂಗಳೂರು: ಮಹಿಳೆಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅವುಗಳನ್ನು ಮರೆಮಾಚಿ ಸ್ಕಾರ್ಫ್ ವಿವಾದವನ್ನು ಮುನ್ನೆಲೆಗೆ ತರಲಾಗಿದೆ. ಸ್ಕಾರ್ಫ್ ವಿವಾದದ ಹಿಂದೆ ಮುಸ್ಲಿಮ್ ಮಹಿಳೆಯರನ್ನು ಶಿಕ್ಷಣದಿಂದ ಹೊರಗಿಡುವ ಮನುವಾದದ ಷಡ್ಯಂತರವಿದೆ ಎಂದು ವಿಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಆರೋಪಿಸಿದ್ದಾರೆ.
ರಾಜ್ಯದ ಹಲವು ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ನಡೆಯನ್ನು ಖಂಡಿಸಿ ಮಂಗಳೂರಿನಲ್ಲಿ ಸೋಮವಾರ ಕರಾವಳಿ ಮಹಿಳಾ ಹಕ್ಕುಗಳ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ 2021 -2022 ರ ಮಾರ್ಗ ಸೂಚಿಯ ಅನುಸಾರ ಪಿಯು ಹಂತದಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ಸಮವಸ್ತ್ರವನ್ನು ಆಯಾ ಕಾಲೇಜಿನ ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರು ಕಡ್ಡಾಯಗೊಳಿಸಿದರೆ ಅದು ಕಾನೂನುಬಾಹಿರವೆಂದು ಉಲ್ಲೇಖಿಸಲಾಗಿದೆ. ಸಮವಸ್ತ್ರ ಕಡ್ಡಾಯಗೊಳಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸುವ ಸೂಚನೆಯನ್ನು ಸಹ ಇಲಾಖೆ ನೀಡಿತ್ತು. ಆದರೆ ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರದ ನೆಪವನ್ನಿಟ್ಟು ಮುಸ್ಲಿಂ ವಿದ್ಯಾರ್ಥಿನಿಯರನ್ನು ಸಮವಸ್ತ್ರದ ಜೊತೆ ಶಿರವಸ್ತ್ರ ಧರಿಸಿದ ಏಕೈಕ ಕಾರಣಕ್ಕಾಗಿ ಸುಮಾರು ಒಂದೂವರೆ ತಿಂಗಳಿಂದ ತರಗತಿಗಳಿಗೆ ನಿರ್ಬಂಧಿಸಲಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಚರ್ಚೆಗಳು ಆಗಿವೆ. ಈ ರೀತಿ ನಡೆಯುವ ಸಂದರ್ಭದಲ್ಲಿಯೇ ಕುಂದಾಪುರ ಸರಕಾರಿ ಕಾಲೇಜಿನಲ್ಲೂ ಪ್ರಾಂಶುಪಾಲರು ಕಳೆದ ಹಲವು ದಿನಗಳಿಂದ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರನ್ನು ಗೇಟಿನ ಹೊರ ಹಾಕಿ ತರಗತಿಗೆ ಅವಕಾಶ ಕೊಡದೆ ಸುಡು ಬಿಸಿಲಿನ ಬೇಗೆಯಲ್ಲಿ ನಿಲ್ಲುವಂತೆ ಅಮಾನವೀಯವಾಗಿ ಮೆರೆದಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ಸುಮತಿ ಹೆಗ್ಡೆ ಮಾತನಾಡಿ, ಕುತ್ತಿಗೆಯ ಸಾಲನ್ನು ತಲೆಯ ಮೇಲೆ ಸುತ್ತಿದರೆ ಯಾಕಿಷ್ಟು ದ್ವೇಷ. ಅವರವರ ಧರ್ಮ ಅವರವರಿಗೆ ಶ್ರೇಷ್ಠ. ನಮ್ಮ ಧರ್ಮವನ್ನು ಪಾಲಿಸೋಣ, ಇತರ ಧರ್ಮವನ್ನು ಗೌರವಿಸೋಣ ಇದುವೇ ನೈಜ ಹಿಂದೂ ಧರ್ಮ ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಹೋರಾಟಗಾರ್ತಿ ಫಾತಿಮಾ ಉಸ್ಮಾನ್, ಧರ್ಮ ಧರ್ಮಗಳ ನಡುವೆ ವಿಭಜನೆಯನ್ನು ಬಯಸುವ ಒಂದು ವರ್ಗವು ಹಿಜಾಬನ್ನು ವಿರೋಧಿಸುವ ಮೂಲಕ ಒಂದೇ ಧರ್ಮವನ್ನು ಪ್ರತಿಪಾದಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ಹಿಜಾಬ್ ವಿರೋಧಿ ನಡೆಯನ್ನು ನಾವು ಎಂದೂ ಸ್ವೀಕರಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಈ ಹೋರಾಟವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಮುಂದುವರೆಯುತ್ತದೆ. ಹೇಗೆ ಎನ್ ಆರ್ ಸಿ ಸಿಎಎಗೆ ಶಾಹಿನ್ ಭಾಗ್ ಸಾಕ್ಷಿಯಾಯಿತೋ ಹಾಗೆಯೇ ನಿಮ್ಮ ಅಸಾಂವಿಧಾನಿಕ ಯೋಚನೆಗಳಿಗೆ ಕರ್ನಾಟಕದಾದ್ಯಂತ ಮೂಲೆ ಮೂಲೆಗಳಲ್ಲಿಯೂ ಶಾಹಿನ್ ಭಾಗ್ ನಡೆಸಲು ನಾವು ಸಿದ್ಧ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಹೋರಾಟಗಾರ್ತಿಯರಾದ ನಸೀಮ್ ಝುರೈ ಉಡುಪಿ, ಸಹಲಾ, ಶಾಕಿರಾ, ಮೆಹರ್ ಮತ್ತಿತರರು ಭಾಗವಹಿಸಿದ್ದರು.