ಏಷ್ಯಾ ಕಪ್ ಟಿ20 ಆರಂಭವಾಗಲು ಇನ್ನೂ ಕೇವಲ ಒಂದು ವಾರ ಇರುವಾಗಲೇ, ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮೊಣಕಾಲು ಗಾಯದ ಕಾರಣ ತಂಡದ ಪ್ರಮುಖ ಬೌಲರ್ ಶಾಹಿನ್ ಅಫ್ರಿದಿ ತಂಡದಿಂದ ಹೊರನಡೆದಿದ್ದಾರೆ. ಏಷ್ಯಾ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಪಾಕಿಸ್ತಾನಕ್ಕೆ, ಅಫ್ರಿದಿ ಅಲಭ್ಯತೆ ಟೂರ್ನಿ ಆರಂಭಕ್ಕೂ ಮುನ್ನವೇ ಆಘಾತವನ್ನುಂಟು ಮಾಡಿದೆ.
ಆಗಸ್ಟ್ 27ರಂದು ಯುಎಇಯಲ್ಲಿ ಏಷ್ಯಾ ಕಪ್ ಆರಂಭವಾಗಲಿದ್ದು. 28ರಂದು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯದಿಂದ ಅಫ್ರಿದಿ ಹೊರಗುಳಿದಿರುವುದು ಪಾಕಿಸ್ತಾನಕ್ಕೆ ಚಿಂತೆಯುಂಟುಮಾಡಿದೆ.
ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದ ವೇಳೆ ಶಾಹಿನ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಇದೇ ಅಂಗಣದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ವೇಗದ ಬೌಲರ್ ಆಡಿರಲಿಲ್ಲ. ನೆದರ್ಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅಫ್ರಿದಿ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ ಆಡಿರಲಿಲ್ಲ. ಏಷ್ಯಾ ಕಪ್ ಟೂರ್ನಿಯ ವೇಳೆಗೆ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಲಿದ್ದಾರೆ ಎಂಬ ವಿಶ್ವಾಸವನ್ನು ಪಾಕಿಸ್ತಾನ ಟೀಮ್ ಮ್ಯಾನೇಜ್‌ಮೆಂಟ್ ಹೊಂದಿತ್ತು. ಆದರೆ ಯುವ ವೇಗಿಯ ಗಾಯದ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರು ಏಷ್ಯಾ ಕಪ್ ಟೂರ್ನಿಯಿಂದ ಅನಿವಾರ್ಯವಾಗಿ ಹೊರ ನಡೆದಿದ್ದಾರೆ.