ಬೆಂಗಳೂರು: ಅಲ್ಪಸಂಖ್ಯಾತರಿಗೆ ಶಾದಿ ಮಹಲ್ ಯೋಜನೆ ಬಿಟ್ಟು ಉಳಿದ ಎಲ್ಲಾ ಯೋಜನೆಗಳನ್ನು ಮುಂದುವರಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೊತ್ತರದ ಅವಧಿಯಲ್ಲಿ ಸದಸ್ಯ ಸಿಎಂ ಇಬ್ರಾಹಿ, ಸಾಚಾರ್ ಸಮಿತಿಯ ಪ್ರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ 72 ಯೋಜನೆಗಳಿದ್ದವು, ಈಗ ಉಳಿದಿರುವುದು 28 ಮಾತ್ರ. ವ್ಯಾಸಂಗ, ಸಣ್ಣಪುಟ್ಟ ವ್ಯಾಪಾರಗಳಿಗೆ ನೆರವು ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಆಕ್ಷೇಪಿಸಿದರು.
ಅದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಯವರು, ಶಾದಿ ಮಹಲ್ ಎಂಬ ಯೋಜನೆಯನ್ನು ಕಳೆದ ವರ್ಷ ನಿಲ್ಲಿಸಲಾಗಿದೆ. ಅದನ್ನು ಹೊರತು ಪಡಿಸಿ ಯಾವ ಯೋಜನೆಯನ್ನು ನಿಲ್ಲಿಸಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಯಲು ಜನವರಿಯಿಂದ ಅನುಮತಿ ನೀಡಿದ್ದೇವೆ. ಘಟಕ ವೆಚ್ಚವನ್ನು ಒಂದು ವರೆ ಲಕ್ಷ ದಿಂದ ಎರಡು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಯೋಜನೆಯ ವಿಳಂಬ ತಪ್ಪಿಸಲು ಫಲಾನುಭವಿಗೆ ಮೂರು ಕಂತಿನಲ್ಲಿ ನೇರವಾಗಿ ಹಣ ಪಾವತಿ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಅಲ್ಪಸಂಖ್ಯಾತರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುತ್ತಿದೆ. ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಆಹಾರದ ವೆಚ್ಚ ವೆಚ್ಚಿಸಲಾಗಿದೆ. ಬೀದಿ ಬದಿ ವ್ಯಾಪಾರ ಮಾಡುವ ಅಲ್ಪ ಸಂಖ್ಯಾತರಿಗೆ ವಿಶೇಷ ಸಾಲದ ಯೋಜನೆ ಜಾರಿಗೆ ತರಲಾಗಿದೆ. ಅಲ್ಪಸಂಖ್ಯಾತರ ಜನ ಸಂಖ್ಯೆ ಹೆಚ್ಚಿರುವ ನಗರ ಪ್ರದೇಶಗಳನ್ನು ವಿಶೇಷವಾಗಿ ಪರಿಗಣಿಸಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು, ಆ ಭಾಗವನ್ನು ಕೊಳಚೆ ಪ್ರದೇಶ ಎಂದು ಪರಿಗಣಿಸಿ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡಿದ್ದೇವೆ. ಪಿಎಚ್ ಡಿಗೆ ನೀಡುತ್ತಿದ್ದ ನೆರವನ್ನು ನಿಲ್ಲಿಸಲಾಗಿತ್ತು. ತಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಶುರು ಮಾಡಿದ್ದೇವೆ ಎಂದರು. ಸದಸ್ಯರಾದ ಸಲೀಂ ಅಹ್ಮದ್, ನಜೀರ್ ಅಹ್ಮದ್ ಮತ್ತಿತರ ಉಪ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಯವರು, ಮುಂದಿನ ದಿನಗಳಲ್ಲಿ ಜನಸಂಖ್ಯೆ ಮತ್ತು ಬೇಡಿಕೆ ಆಧರಿಸಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು