ಬೆಂಗಳೂರು: ಮಕ್ಕಳ ಪೌಷ್ಟಿಕ ಆಹಾರ ಮೊಟ್ಟೆ ವಿತರಣೆಯಲ್ಲಿ ಮತೀಯ ರಾಜಕಾರಣ ಮಾಡುತ್ತಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಪ್ರತಿಯೊಂದು ಮಗುವಿಗೂ ಮೊಟ್ಟೆ ಹಾಗೂ ಪೌಷ್ಟಿಕ ಆಹಾರವನ್ನು ಸರ್ಕಾರ ಖಾತ್ರಿಗೊಳಿಸಬೇಕೆಂದು ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ವಿತರಣೆ ಮಾಡಲಾಗುತ್ತಿದೆ. ಹೀಗಿರುವಾಗ ನಿನ್ನೆ ಬೀದರ್ ನಲ್ಲಿ ಕೆಲ ಸಂಘಟನೆಯಿಂದ ಮೊಟ್ಟೆ ವಿತರಣೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ.
ಒಂದು ವೇಳೆ ಇಂತಹ ಮತೀಯ ರಾಜಕಾರಣದ ಕಾರಣಗಳಿಗಾಗಿ ರಾಜ್ಯ ಸರ್ಕಾರ ಮೊಟ್ಟೆ ಆಹಾರವನ್ನು ಮೊಟಕುಗೊಳಿಸಿದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಲಿದ್ದಾರೆ ಎಂದು ಎಸ್ ಎಫ್ ಐ ಸಂಘಟನೆ ಎಚ್ಚರಿಕೆ ನೀಡಿದೆ.
ಶೈಕ್ಷಣಿಕ ಕ್ಷೇತ್ರದ ನೈಜ ಸಮಸ್ಯೆಗಳನ್ನು ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ತಿನ್ನುವ ಆಹಾರದ ವಿಷಯದಲ್ಲಿ ಮತೀಯ ರಾಜಕಾರಣದ ಕ್ಷುಲ್ಲಕ ವಿವಾದಗಳನ್ನು ಸೃಷ್ಟಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ, ವ್ಯಾಪಾರೀಕರಣ, ಕೋಮುವಾದೀಕರಣ, ಕೇಂದ್ರೀಕರಣವನ್ನು ತೀವ್ರಗೊಳಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇ ಪಿ)ಯನ್ನು ಅಪ್ರಜಾಸತ್ತಾತ್ಮಕವಾಗಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿ ಬಡವರು, ತಳ ವರ್ಗದ ಮಕ್ಕಳನ್ನು ಅಕ್ಷರ ಮತ್ತು ಆಹಾರದ ಹಕ್ಕಿನಿಂದ ವಂಚಿಸುವ ವ್ಯವಸ್ಥಿತವಾದ ಹುನ್ನಾರವಿದು ಎಂದು ಎಸ್ ಎಫ್ ಐ ಆರೋಪಿಸಿದೆ.