Home ಕರಾವಳಿ ಪಠ್ಯಪುಸ್ತಕ ಪರಿಷ್ಕರಣೆ ನಾಡು-ನುಡಿಗೆ ಎಸಗಿರುವ ದ್ರೋಹ: SFI ಮಾಜಿ ಮುಖಂಡ ಮನೋಜ್ ವಾಮಂಜೂರು ಆಕ್ರೋಶ

ಪಠ್ಯಪುಸ್ತಕ ಪರಿಷ್ಕರಣೆ ನಾಡು-ನುಡಿಗೆ ಎಸಗಿರುವ ದ್ರೋಹ: SFI ಮಾಜಿ ಮುಖಂಡ ಮನೋಜ್ ವಾಮಂಜೂರು ಆಕ್ರೋಶ

ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನಾಡು-ನುಡಿಗೆ ಎಸಗಿರುವ ದ್ರೋಹವಾಗಿದೆ ಎಂದು SFI ಮಾಜಿ ಮುಖಂಡ ಮನೋಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಶನ್ (SFI) ದ.ಕ ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಅವೈಜ್ಞಾನಿಕ ರೀತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆಯನ್ನು ಉದ್ದೇಶಿಸಿದ ಮಾತನಾಡಿದ ಅವರು ರೋಹಿತ್ ಚಕ್ರತೀರ್ಥ ರವರ ಅಧ್ಯಕ್ಷತೆಯಲ್ಲಿ ನಡೆಸಿರುವ ಪಠ್ಯಪುಸ್ತಕ ಪರಿಷ್ಕರಣೆಯನ್ನು ನಾಡಿನ ಪ್ರಜ್ಞಾವಂತರು ಒಪ್ಪುವಂತಿಲ್ಲ. ಇಲ್ಲಿನ ಸಮಾಜ ಸುಧಾರಕರಾದ ನಾರಾಯಣ ಗುರುಗಳನ್ನು, ಸ್ವಾತಂತ್ರ್ಯ ಹೋರಾಟದ ಧ್ರುವತಾರೆಯಾದ ಭಗತ್ ಸಿಂಗರ ಪಠ್ಯಗಳನ್ನು ತೆಗೆದಿರುವುದು ಖಂಡನೀಯ. ಮತ್ತು ಕನ್ನಡದ ಸಾಹಿತಿಕ ನೆಲೆಯ ಬಹುಮುಖ್ಯ ಭಾಗವಾಗಿರುವ ಪಿ.ಲಂಕೇಶ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣರ ಪಠ್ಯಗಳನ್ನು ತೆಗೆದಿದ್ದು. ರಾಷ್ಟ್ರಕವಿ ಕುವೆಂಪುರವರನ್ನು ಮತ್ತು ನಾಡಗೀತೆಯನ್ನು ಅವಮಾನಿಸುತ್ತಾ ಬಂದಿರುವುದು ಕರುನಾಡಿನ ನಾಡು-ನುಡಿಗೆ ಎಸಗಿರುವ ದ್ರೋಹ ಎಂದು ತಿಳಿಸಿದ್ದಾರೆ.

ನಾರಾಯಣ ಗುರುಗಳು ಬ್ರಾಹ್ಮಣ ಸಾಹಿತ್ಯವನ್ನು ದಿಕ್ಕರಿಸಿ ಜಾತಿಮತದ ಭೇದವನ್ನು ಧಿಕ್ಕರಿಸಿ ಐಕ್ಯತೆಯನ್ನು ಸಾರಿದವರಾಗಿದ್ದು, ಕುವೆಂಪುರವರು ಕೂಡ ಈ ಮಣ್ಣನ್ನು ಸರ್ವಜನಾಂಗದ ಶಾಂತಿಯ ತೋಟ ಎನ್ನುವುದಾಗಿ ಬಣ್ಣಿಸಿದವರು. ಆ ಕಾರಣಕ್ಕಾಗಿ ಈ ಕೋಮುವಾದಿ ಸರಕಾರ ಇವರನ್ನು ಅವಮಾನಿಸುತ್ತಿದೆ ಮತ್ತು ಶಿಕ್ಷಣ ತಜ್ಞರೇ ಅಲ್ಲದವರನ್ನು ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಸಿ ಈ ನಾಡಿನ ಶ್ರೀಮಂತ ಸಾಹಿತ್ಯವನ್ನು ಹೀಗಳೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಷನ್ (SFI) ನ ದಕ ಜಿಲ್ಲಾ ಸಂಚಾಲಕರಾದ ವಿನಿತ್ ದೇವಾಡಿಗ ರವರು ಮಾತನಾಡುತ್ತಾ, ದೇಶದ ಸ್ವತಂತ್ರ ಚಳುವಳಿಯ ಸಮಯದಲ್ಲಿ ಬ್ರಿಟಿಷರ ಜೊತೆಯಲ್ಲಿ ಶಾಮೀಲಾದ ಹೆಡಗೇವಾರ್ ರನ್ನು ರಾಷ್ಟ್ರ ನಾಯಕನೆಂದು ಬಿಂಬಿಸಿ ಪಠ್ಯಗಳಲ್ಲಿ ಸೇರಿಸಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಭಟನಾ ಸಭೆಯಲ್ಲಿ ಸಹ ಸಂಚಾಲಕರಾದ ವಿನುಷ ರಮಣ ಭಟ್ , ಮುಖಂಡರಾದ ತಿಲಕ್ ಕುತ್ತಾರ್, ಭಾಷಿತ್, ವಿಕಾಸ್ ಕುತ್ತಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Join Whatsapp
Exit mobile version