Home ಕರಾವಳಿ SEZ ವಿಷಾನಿಲ ದುರಂತ | ಪರಿಹಾರ ನೀಡದಿದ್ದಲ್ಲಿ ಕಂಪೆನಿ ತೆರೆಯಲು ಬಿಡಲಾರೆವು: SDPI ಎಚ್ಚರಿಕೆ

SEZ ವಿಷಾನಿಲ ದುರಂತ | ಪರಿಹಾರ ನೀಡದಿದ್ದಲ್ಲಿ ಕಂಪೆನಿ ತೆರೆಯಲು ಬಿಡಲಾರೆವು: SDPI ಎಚ್ಚರಿಕೆ

ಮಂಗಳೂರು: ಇಂದು ಮಂಗಳೂರಿನ SEZನಲ್ಲಿ ನಡೆದಿರುವ ಶ್ರೀ ಉಲ್ಕ ಫಿಶ್ ಮಿಲ್ ವಿಷಾನಿಲ ದುರಂತದಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡದಿದ್ದಲ್ಲಿ ಕಂಪೆನಿ ಕಾರ್ಯಾಚರಣೆ ನಡೆಸಲು ಬಿಡಲಾರೆವು ಎಂದು SDPI ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.


ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ SDPI ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಅವರು, ಕಾರ್ಖಾನೆ ಕಾಯ್ದೆ ಪ್ರಕಾರ ಸಾಯಂಕಾಲ 6 ಗಂಟೆ ನಂತರ ಡ್ರೈನೇಜ್ ಗೆ ಇಳಿಸುವಂತಿಲ್ಲ ಅಲ್ಲದೇ ಕಂಪೆನಿಯಲ್ಲಿ ಯಾವುದೇ ಸುರಕ್ಷತಾ ಸಾಧನಗಳು ಇರಲಿಲ್ಲ, ಆಕ್ಸಿಜನ್ ಮಾಸ್ಕ್, ಮೇಲಕ್ಕೆತ್ತಲು ಹಗ್ಗ, ಹುಕ್ ಬೆಲ್ಟ್, ಮಾಸ್ಕ್ , ಗ್ಲೌಸ್ ಗಳು ನೀಡಲಾಗಿರಲಿಲ್ಲ, ಕನಿಷ್ಠ ಪಕ್ಷ ಆ್ಯಂಬುಲೆನ್ಸ್ ಸೇವೆಯೂ ಇರಲಿಲ್ಲ ಎಂದು ಆರೋಪಿಸಿದ್ದಾರೆ.


ಕಂಪೆನಿಯ ನಿರ್ಲಕ್ಷ್ಯಕ್ಕೆ ಐದು ಅಮಾಯಕ ಜೀವಗಳು ಬಲಿಯಾಗಿವೆ. ಕಾರ್ಮಿಕರನ್ನು SEZ ಕಂಪೆನಿಗಳಲ್ಲಿ ಜೀತದಾಳುಗಳಂತೆ ದುಡಿಸಲಾಗುತ್ತಿದೆ. ಸುಮಾರು 12 ಗಂಟೆ ಕೆಲಸ ಮಾಡಿಸಿ ಕೇವಲ 300-400 ರೂ ವೇತನ ನೀಡುತ್ತಾರೆ. ಇಫ್ತಾರ್ ಸಮಯದಲ್ಲೂ ಯಾವುದೇ ವಿನಾಯಿತಿ ನೀಡುತ್ತಿರಲಿಲ್ಲ. ಕಾರ್ಖಾನೆಯಲ್ಲಿ ರಕ್ಷಣಾ ಕ್ರಮವಿಲ್ಲದಿದ್ದರೂ ಅಂತಹ ಕಂಪೆನಿಗಳಿಗೆ ಯಾವ ಮಾನದಂಡದ ಮೇಲೆ ಲೈಸೆನ್ಸ್ ಕೊಡಲಾಗಿದೆ? ಕಾರ್ಖಾನೆಗೆ ಲೈಸೆನ್ಸ್ ನೀಡಿದ ಇಲಾಖೆ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ರಿಯಾಝ್ ಆಗ್ರಹಿಸಿದ್ದಾರೆ.


ಕಾರ್ಮಿಕರನ್ನು ನೇಮಿಸಿಕೊಂಡಿದ್ದಕ್ಕೂ ಯಾವುದೇ ದಾಖಲೆ ಇಲ್ಲ, SEZ ನಲ್ಲಿರುವ ಕಾರ್ಖಾನೆಗಳಲ್ಲಿ ಇಂತಹ ಅವಘಡ ಮೊದಲಲ್ಲ. ಕಾರ್ಖಾನೆಗಳು ಕಾರ್ಮಿಕ ಕಾನೂನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಇಲಾಖೆಗಳಿಗೆ ಈ ಕಾರ್ಮಿಕರ ಕುರಿತು ಮಾಹಿತಿಯೇ ಇಲ್ಲ, ಲೈಸೆನ್ಸ್ ನೀಡಿದ ಇಲಾಖಾ ಅಧಿಕಾರಿ ಹಾಗೂ ಕಾರ್ಖಾನೆ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.


ನಾಲ್ಕು ಬೇಡಿಕೆ ಇಟ್ಟ SDPI :
ಘಟನೆಯ ಕುರಿತು SDPI ನಾಲ್ಕು ಪ್ರಮುಖ ಬೇಡಿಕೆಗಳನ್ನಿಟ್ಟಿದ್ದು, ಬೇಡಿಕೆಗಳನ್ನು ಈಡೇರಿಸುವಂತೆ SDPI ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆಗ್ರಹಿಸಿದ್ದಾರೆ.

1 ಪರಿಶೀಲನೆ ನಡೆಸದೇ ಲೈಸೆನ್ಸ್ ನೀಡಿದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಮಾಲಿಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು.ಐವರ ಮೃತದೇಹವನ್ನು ವಿಮಾನ ಮೂಲಕ ತವರಿಗೆ ತಲುಪಿಸಬೇಕು.

2 ಇದರ ಜವಾಬ್ದಾರಿಯನ್ನು ಕಂಪೆನಿ ಹಾಗೂ ಜಿಲ್ಲಾಡಳಿತ ವಹಿಸಿಕೊಳ್ಳಬೇಕು.

3 ಐವರು ಮೃತ ಕಾರ್ಮಿಕರ ಕುಟುಂಬಿಕರಿಗೆ ಕಂಪೆನಿಯಿಂದ ತಲಾ 25 ಲಕ್ಷ ಹಾಗೂ ಸರಕಾರದಿಂದ ಜಿಲ್ಲಾಡಳಿತ 25 ಲಕ್ಷ ಪರಿಹಾರ ನೀಡಬೇಕು.

4 ಐಸಿಯು ನಲ್ಲಿರುವ ರೋಗಿಗಳಿಗೂ ಸೂಕ್ತ ಪರಿಹಾರ ಒದಗಿಸಬೇಕು.


ಸುದ್ದಿ ಗೋಷ್ಠಿಯಲ್ಲಿ SDPI ಮುಖಂಡರಾದ ಆಸಿಫ್ ಕೋಟೆಬಾಗಿಲು, ಶರೀಫ್ ಪಾಂಡೇಶ್ವರ, ಇಸ್ಮಾಯಿಲ್ ಇಂಜಿನಿಯರ್, ಪ್ರತ್ಯಕ್ಷದರ್ಶಿ ಕಾರ್ಮಿಕ ಹಸನ್ ಮುಂಡೋಲ್, ಮೃತ ಉಮರುಲ್ ಫಾರೂಕ್ ಕುಟುಂಬಸ್ಥ ಹಿದಾಯತುಲ್ಲ, ಮೃತ ನಿಝಾಮುದ್ದೀನ್ ಕುಟುಂಬಸ್ಥ ನೂರುಲ್ ಝಮಾನ್ ಉಪಸ್ಥಿತರಿದ್ದರು.

Join Whatsapp
Exit mobile version