ಆಗ್ರಾ: ನೈಋತ್ಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ 17 ವರ್ಷ ಪ್ರಾಯದ ಮುಹಮ್ಮದ್ ಶೌಕತ್ ಎಂಬಾತನನ್ನು ಮೂವರು ಬಾಲಾಪರಾಧಿಗಳು ಸೇರಿದಂತೆ ಕನಿಷ್ಠ 15 ಜನರ ಗುಂಪು ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಕುಟುಂಬದ ಸದಸ್ಯರು ಮುಂದಾಗಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಗಳನ್ನು ಅಪ್ಲೋಡ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶೌಕತ್ ಮತ್ತು ಆರೋಪಿಗಳ ನಡುವೆ ಜಗಳ ಪ್ರಾರಂಭವಾಗಿ ಶೌಕತ್ ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಸಂತ್ರಸ್ತನ ಸಹೋದರಿ, ಕನಿಷ್ಠ 20 ಮಂದಿಯ ದುಷ್ಕರ್ಮಿಗಳ ತಂಡವೊಂದು ನನ್ನ ಸಹೋದರನನ್ನು ಅಮಾನುಷವಾಗಿ ಕೊಂದು ಹಾಕಿದೆ ಎಂದು ತಿಳಿಸಿದ್ದಾಳೆ.
“ತನ್ನ ಮಗನನ್ನು ಕೊಂದ ಆರೋಪಿಗಳನ್ನು ಗಲ್ಲಿಗೇರಿಸಬೇಕು” ಎಂದು ಮೃತನ ತಾಯಿ ಆಗ್ರಹಿಸಿದ್ದಾರೆ.
ಈ ಮಧ್ಯೆ ಶೌಕತ್ ಕುಟುಂಬದ ಸದಸ್ಯರು ಉತ್ತಮ್ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.