Home ಟಾಪ್ ಸುದ್ದಿಗಳು ಲೈಂಗಿಕ ಕಿರುಕುಳ ಪ್ರಕರಣ: ಪ್ರಚೋದನಕಾರಿ ಉಡುಪು ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

ಲೈಂಗಿಕ ಕಿರುಕುಳ ಪ್ರಕರಣ: ಪ್ರಚೋದನಕಾರಿ ಉಡುಪು ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

ಕೋಝಿಕ್ಕೋಡ್: ಸಂತ್ರಸೆಯು ಲೈಂಗಿಕವಾಗಿ ಪ್ರಚೋದನೆ ನೀಡುವಂಥ ಉಡುಪು ಧರಿಸಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂಬ ವಿವಾದಾತ್ಮಕ ತೀರ್ಪು ಪ್ರಕಟಿಸಿದ್ದಲ್ಲದೇ ಆರೋಪಿ ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಕೋಝಿಕ್ಕೋಡ್ ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆದೇಶಕ್ಕೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ.


ಜಾಮೀನು ಮಂಜೂರು ಮಾಡುವಾಗ ಸೆಷನ್ಸ್ ನ್ಯಾಯಾಧೀಶರು ಅಪ್ರಸ್ತುತ ದಾಖಲೆಗಳನ್ನು ಆಧರಿಸಿರುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ನ್ಯಾ. ಕೌಸರ್ ಎಡಪ್ಪಗತ್ ಅವರು ಹೇಳಿದ್ದಾರೆ.


“ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಸೆಷನ್ಸ್ ನ್ಯಾಯಾಧೀಶರು ನ್ಯಾಯವ್ಯಾಪ್ತಿಯನ್ನು ಅಸಮರ್ಪಕವಾಗಿ ಬಳಕೆ ಮಾಡಿದ್ದಾರೆ ಎಂದೆನಿಸುತ್ತದೆ. ಗಣನೀಯ ಸ್ವರೂಪದ ಅಪ್ರಸ್ತುತ ವಸ್ತು, ದಾಖಲೆಗಳನ್ನು ಜಾಮೀನು ನೀಡಲು ಅವಲಂಬಿಸಲಾಗಿದೆ. ಸಂತ್ರಸ್ತೆಯು ಪ್ರಚೋದನಾಕಾರಿ ಉಡುಪು ಧರಿಸಿದ್ದರೆ ಉಲ್ಲೇಖಿತ ಐಪಿಸಿ ಸೆಕ್ಷನ್ ಅನ್ವಯಿಸುವುದಿಲ್ಲ ಎಂಬ ಆಕ್ಷೇಪಾರ್ಹ ಆದೇಶವನ್ನು ಸಮರ್ಥಿಸಲಾಗದು. ಹಾಲಿ ಮನವಿ ವಿಲೇವಾರಿಯಾಗುವವರೆಗೆ ಆಕ್ಷೇಪಾರ್ಹವಾದ ಆದೇಶಕ್ಕೆ ತಡೆ ನೀಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.


“ಆರೋಪಿಯ ವಯಸ್ಸನ್ನು ಪರಿಗಣಿಸಿ, ಅರ್ಜಿ ವಿಲೇವಾರಿ ಆಗುವವರೆಗೆ ಅವರನ್ನು ಬಂಧಿಸಬಾರದು” ಎಂದು ಆದೇಶದಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.

Join Whatsapp
Exit mobile version