Home ಟಾಪ್ ಸುದ್ದಿಗಳು ದೆಹಲಿ ಸರಕಾರದ ಮನೆ ಬಾಗಿಲಿಗೆ ಪಡಿತರ ಯೋಜನೆ ತಡೆದ ಉಚ್ಚ ನ್ಯಾಯಾಲಯ: ಕೇಜ್ರಿವಾಲ್ ಯೋಜನೆಗೆ ಹಿನ್ನಡೆ

ದೆಹಲಿ ಸರಕಾರದ ಮನೆ ಬಾಗಿಲಿಗೆ ಪಡಿತರ ಯೋಜನೆ ತಡೆದ ಉಚ್ಚ ನ್ಯಾಯಾಲಯ: ಕೇಜ್ರಿವಾಲ್ ಯೋಜನೆಗೆ ಹಿನ್ನಡೆ

ನವದೆಹಲಿ: ದೇಶದ ರಾಜಧಾನಿಯಲ್ಲಿ ಮನೆ ಬಾಗಿಲಿಗೆ ಪಡಿತರ ಮುಟ್ಟಿಸುವ ದಿಲ್ಲಿ ರಾಜ್ಯ ಸರಕಾರದ ಯೋಜನೆಗೆ ಸುಪ್ರೀಂ ಕೋರ್ಟು ತಡೆ ನೀಡಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲರಿಂದ 2018ರಲ್ಲೇ ಘೋಷಣೆಯಾದ ಯೋಜನೆಯಿದು. ಇದನ್ನು ತಾಂತ್ರಿಕ ಕಾರಣಕ್ಕಾಗಿ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರ ಸರಕಾರವು ತೀವ್ರವಾಗಿ ವಿರೋಧಿಸುತ್ತಿದೆ. 2021ರಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವು ವಿರೋಧ ಲೆಕ್ಕಿಸದೆ ಯೋಜನೆ ನಡೆಸಲು ಮುಂದಾದಾಗ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತು. ಲೆಫ್ಟಿನೆಂಟ್ ಗವರ್ನರ್ ರ ವಿರೋಧ ಪರಿಗಣಿಸಿದ ಕೋರ್ಟ್, ಈ ರೀತಿಯಲ್ಲಿ ಇದನ್ನು ಜಾರಿ ಮಾಡಲಾಗದು ಎಂದು ಯೋಜನೆಗೆ ತಡೆ ನೀಡಿತು.
ಯೋಜನೆ ಮತ್ತು ಅಡೆಗಡೆಗಳು
ಸಾರ್ವಜನಿಕ ವಿತರಣೆ ಪದ್ಧತಿಯಡಿ 2018ರ ಮಾರ್ಚ್ ನಲ್ಲಿ ದಿಲ್ಲಿ ರಾಜ್ಯ ಸಂಪುಟ ಸಭೆಯು ಮನೆ ಬಾಗಿಲಿಗೆ ಪಡಿತರ ಮುಟ್ಟಿಸುವ ಯೋಜನೆಗೆ ಒಪ್ಪಿಗೆ ನೀಡಿತು. ಇದಕ್ಕೆ ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನ ಎಂದು ಹೆಸರು ಇಡಲಾಯಿತು. ಯೋಜನೆಯ ಉದ್ದೇಶ ಭ್ರಷ್ಟಾಚಾರ ತೊಡೆಯುವುದು. ಇದರಿಂದ ಹಾಗೇನೂ ಆಗದು, ಹೊಸ ರೀತಿಯ ವಿತರಣೆ ಅನಗತ್ಯ ಎಂದು ಮೊದಲಿಗೆ ವಿರೋಧಿಸಿದವರು ಲೆಫ್ಟಿನೆಂಟ್ ಗವರ್ನರ್. ವಿಷಯವನ್ನು ಕೇಂದ್ರ ಸರಕಾರದ ಮುಂದಿಡಬೇಕು ಎಂದೂ ಗವರ್ನರ್ ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಮತ್ತೆ ತಕರಾರು ತೆಗೆದರೂ ಯೋಜನೆ ಜಾರಿಗೆ ತರಲು ಎಎಪಿ ಮುಂದಡಿಯಿಟ್ಟಿತು. 2021ರ ಫೆಬ್ರವರಿಯಲ್ಲಿ ದಿಲ್ಲಿ ರಾಜ್ಯ ಸರಕಾರವು ಯೋಜನೆಯ ಬಗ್ಗೆ ಸುತ್ತೋಲೆ ಹೊರಡಿಸಿತು. ಅದರ ಹೆಸರಿಗೆ ಒಕ್ಕೂಟ ಸರಕಾರವು ತಕರಾರು ತೆಗೆಯಿತು. ಎನ್ ಎಫ್ ಎಸ್ ಎ- ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಧಾನ್ಯ ಬೆರೆಸದೆ ದಿಲ್ಲಿ ರಾಜ್ಯ ಸರಕಾರವು ಬೇರೆಯೇ ಯೋಜನೆ ತರುವುದಾದರೆ ಅದನ್ನು ನಾವು ವಿರೋಧಿಸುವುದಿಲ್ಲ ಎಂದೂ ಕೇಂದ್ರ ಸರಕಾರ ಹೇಳಿತು.
ಇದಾದ ಮೇಲೆ ಎಎಪಿ ಸರಕಾರವು ಯೋಜನೆಯ ಹೆಸರಿನಲ್ಲಿ ಮುಖ್ಯಮಂತ್ರಿ ತೆಗೆದು ಯೋಜನೆ ಜಾರಿಗೆ ತರಲು ತೀರ್ಮಾನಿಸಿತು. ಅದರ ಜೊತೆಗೆ ರೇಷನ್ ಅಂಗಡಿಗಳನ್ನು ಮುಚ್ಚುವುದಿಲ್ಲ, ಜನರು ತಮ್ಮ ಆಯ್ಕೆಯ ಮೇಲೆ ಎಲ್ಲಾದರೂ ಕೊಳ್ಳಬಹುದು, ಹೊಸ ಯೋಜನೆಯಂತೆ ಬೇಕಾದರೂ ಪಡೆಯಬಹುದು ಎಂದು ಘೋಷಿಸಿತು.
ಜಾರಿಗೆ ದಾರಿ
ದಿಲ್ಲಿ ರಾಜ್ಯ ನಾಗರಿಕ ವಿತರಣೆ ಕಾರ್ಪೊರೇಷನ್ ಲಿಮಿಟೆಡ್ ನಡಿ ಗುರುತಿಸಲಾದ ಮಿಲ್ಲುಗಳಿಂದ ಆಹಾರ ಸಾಮಗ್ರಿ ಪಡೆದು ಸಂಸ್ಕರಿಸಿ, ಪ್ಯಾಕೆಟ್ ಮಾಡುವ ಸ್ಥಳಕ್ಕೆ ಸಾಗಿಸುವುದು. ದಿಲ್ಲಿ ಗ್ರಾಹಕರ ಸಹಕಾರ ಸಗಟು ಅಂಗಡಿಗಳು ಲಿಮಿಟೆಡ್ ಯಡಿ ಬರುವ ರೇಷನ್ ಅಂಗಡಿಗಳಿಗೆ ಆ ಪ್ಯಾಕಾದ ಪದಾರ್ಥಗಳನ್ನು ಸಾಗಿಸುವುದು. ಸರಕಾರ ನೇಮಿಸಿದ ಏಜೆನ್ಸಿಗಳ ಮೂಲಕ ಕೊನೆಯ ಹಂತದಲ್ಲಿ ಧಾನ್ಯದ ಪ್ಯಾಕೆಟ್ ಗಳನ್ನು ಫಲಾನುಭವಿಗಳ ಮನೆಗೆ ಮುಟ್ಟಿಸುವುದು.
ಕೋರ್ಟ್ ಕದನ
ದಿಲ್ಲಿ ಸರಕಾರದ ಈ ಯೋಜನೆ ಮತ್ತು 2021ರ ಜನವರಿಯಲ್ಲಿ ಈ ಬಗ್ಗೆ ಕರೆದ ಟೆಂಡರು ಪ್ರಕ್ರಿಯೆ ವಿರೋಧಿಸಿ ದಿಲ್ಲಿ ಸರ್ಕಾರ್ ರೇಷನ್ ಡೀಲರ್ಸ್ ಸಂಘ ಮತ್ತು ದಿಲ್ಲಿ ರೇಷನ್ ಡೀಲರ್ಸ್ ಯೂನಿಯನ್ ಹೈಕೋರ್ಟ್ ಮೆಟ್ಟಿಲೇರಿದವು. ಈಗಿರುವ ಪಡಿತರ ಅಂಗಡಿಗಳನ್ನು ಇಲ್ಲವಾಗಿಸುವುದು ಈ ಯೋಜನೆ ಎಂಬುದು ಅವರ ಪ್ರಮುಖ ವಾದವಾಗಿತ್ತು. ಮನೆಗೆ ಮುಟ್ಟಿಸುವ ಏಜೆನ್ಸಿಗಳಿಗಾಗಿ ಟೆಂಡರ್ ಕರೆಯಲಾಗಿತ್ತು.
ಪಡಿತರ ಅಂಗಡಿಗಳ ಹಾಲಿ ಪದ್ಧತಿಯನ್ನು ಎನ್ ಎಫ್ ಎಸ್ ಎ ಕೈಬಿಡುವುದಿಲ್ಲ ಪೂರ್ಣ ಹೊಸ ಡೀಲರ್ ಗಳ ವ್ಯವಸ್ಥೆಯ ಅನಗತ್ಯ ಎಂದು ಕೇಂದ್ರ ಸರಕಾರ ವಾದಿಸಿತು. ಹಾಗೆ ಕೇಂದ್ರ ಸರಕಾರವು ಕೋರ್ಟಿನಲ್ಲಿ ಅರ್ಜಿದಾರರ ಪರ ನಿಂತಿತು. ಪಡಿತರ ವ್ಯವಸ್ಥೆಯನ್ನು ಒಳಗೊಂಡಿರುವ ಪಿಡಿಎಸ್ ಪದ್ಧತಿಯನ್ನು ದಿಲ್ಲಿ ಸರಕಾರ ಕತ್ತರಿಸುವಂತಿಲ್ಲ ಎಂದೂ ವಾದಿಸಲಾಯಿತು.
ಕೋರ್ಟು ಆದೇಶ
ದಿಲ್ಲಿ ರಾಜ್ಯ ಸರಕಾರವು ಮನೆ ಬಾಗಿಲಿಗೆ ಪಡಿತರ ಮುಟ್ಟಿಸುವುದಾದರೆ ಪೂರ್ಣ ಅವರದೇ ಸಂಪನ್ಮೂಲದಿಂದ ಹಂಚಬೇಕು ಎಂದು ನಿರ್ವಾಹಕ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಹೇಳಿದರು. ದಿಲ್ಲಿ ಸರಕಾರವು ಈಗಿರುವ ಪಡಿತರ ಅಂಗಡಿಗಳವರ ಹಿತ ಕಾಯಬೇಕು, ಅವರ ಆರ್ಥಿಕ ಸ್ಥಿತಿಗೆ ಬಾಧಕವಾಗುವಂತೆ ಯೋಜನೆ ಬೇಡ ಎಂದೂ ಕೋರ್ಟು ಹೇಳಿತು.
ಎನ್ ಎಫ್ ಎಸ್ ಎ ಕಾಯ್ದೆಯು ಸಂಸತ್ತಿನಿಂದ ಆಗಿರುವುದಾದ್ದರಿಂದ ಯೋಜನೆಗೆ ದಿಲ್ಲಿ ಸರಕಾರವು ಕೇಂದ್ರ ಸರಕಾರವನ್ನು ಕೇಳಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದನ್ನು ಸಹ ಕೋರ್ಟ್ ಪುರಸ್ಕರಿಸಿತು.
ಅಲ್ಲದೆ ಲೆಫ್ಟಿನೆಂಟ್ ಗವರ್ನರ್ ಜೊತೆ ಅಭಿಪ್ರಾಯ ಭೇದ ಹುಟ್ಟಿದಾಗ ದಿಲ್ಲಿ ಸರಕಾರವು ಅದನ್ನು ರಾಷ್ಟ್ರಪತಿಗಳ ಗಮನಕ್ಕೆ ತರಬೇಕು ಎಂದು ಹೇಳಿದ ಕೋರ್ಟ್, ಇಂಥ ಯೋಜನೆಯು ಲೆಫ್ಟಿನೆಂಟ್ ಗವರ್ನರ್ ಅವರ ಮೂಲಕವೇ ಜಾರಿಯಾಗಬೇಕು ಹೊರತು ಬರೇ ಸಂಪುಟ ತೀರ್ಮಾನದಿಂದ ಅಲ್ಲ ಎಂದು ಸಹ ಕೋರ್ಟ್ ಹೇಳಿತು.
ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರ
ಈಗಿನ ಕಾನೂನಿನಂತೆ ದಿಲ್ಲಿ ಸಂಪುಟದ ಯಾವುದೇ ತೀರ್ಮಾನಕ್ಕೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ರ ಒಪ್ಪಿಗೆ ಮುದ್ರೆ ಬೀಳದೆ ಅದು ಜಾರಿಗೆ ಬರುವಂತಿಲ್ಲ ಎಂದು ಸಹ ಉಚ್ಚ ನ್ಯಾಯಾಲಯ ಹೇಳಿತು. “ಸಂಪುಟದಲ್ಲಿ ಏನು ತೀರ್ಮಾನವಾಯಿತು ಎಂಬುದನ್ನು ಮುಖ್ಯಮಂತ್ರಿಯವರು ಲೆಫ್ಟಿನೆಂಟ್ ಗವರ್ನರ್ ರಿಗೆ ತಿಳಿಸಿ, ಒಪ್ಪಿಗೆ ಮುದ್ರೆ ಪಡೆಯಬೇಕು ಎಂಬುದು ಕ್ರಮ.”

ಲೆಫ್ಟಿನೆಂಟ್ ಗವರ್ನರ್ ಅವರ ಸ್ಪಂದಿಸದಿದ್ದರೆ ವಿಷಯವನ್ನು ರಾಷ್ಟ್ರಪತಿಗಳ ಗಮನಕ್ಕೆ ಅಂತಿಮವಾಗಿ ಮುಟ್ಟಿಸಿ ಒಪ್ಪಿಗೆ ಪಡೆದ ಮೇಲೆಯೇ ಯೋಜನೆ ಜಾರಿಗೊಳಿಸುವುದು ಸಾಧ್ಯ.
“ಆಮೇಲೆ ಲೆಫ್ಟಿನೆಂಟ್ ಗವರ್ನರ್ ಅವರು ರಾಷ್ಟ್ರಪತಿಗಳು ತೆಗೆದುಕೊಂಡ ತೀರ್ಮಾನದಂತೆ ನಡೆಯಬೇಕು. ತುರ್ತು ಸಮಯದಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ಅವರು ತಮ್ಮ ತೀರ್ಮಾನದಂತೆ ಕೆಲಸ ಮಾಡಿ ತಡ ಮಾಡದೆ ಅದನ್ನು ರಾಷ್ಟ್ರಪತಿಗಳ ಗಮನಕ್ಕೆ ತರತಕ್ಕದ್ದು ಅತ್ಯಗತ್ಯ” ಎಂದು ಸಹ ನ್ಯಾಯ ಪೀಠ ಹೇಳಿತು.

Join Whatsapp
Exit mobile version