ಬೆಂಗಳೂರು: ಕಾಮಗಾರಿಗಳಿಗೆ ಕಮಿಷನ್ ಪಡೆಯುವ ಆರೋಪವನ್ನು ಬಿಜೆಪಿ ನಾಯಕರು, ಕುಮಾರಸ್ವಾಮಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಇದೇ ಅಸ್ತ್ರ ಬಳಸಿಕೊಂಡು ವಾಗ್ದಾಳಿ ನಡೆಸಿ ಜಯ ಸಾಧಿಸಿತ್ತು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇದೇ ವಿಚಾರ ದಾಳವಾಗಿ ಮಾಡಿಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಕಮಿಷನ್ ಆರೋಪ ಮಾಡ್ತಿದ್ದಾರೆ. ಆದರೆ ಸಿದ್ದರಾಮಯ್ಯ ವಿಪಕ್ಷಗಳ ಬಾಣವನ್ನು ಅವರ ಕಡೆಗೇ ತಿರುಗಿಸಿದ್ದಾರೆ. ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹಿಂದಿನ ಸರ್ಕಾರ ಹಣವಿಲ್ಲದಿದ್ದರೂ ಕಾಮಗಾರಿಗಳನ್ನು ಮಂಜೂರು ಮಾಡಿ, ಟೆಂಡರ್ ಕರೆದು ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದೆ. 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ? ನಮ್ಮ ಕಾಲದ ಹಾಗೂ ಹಿಂದಿನ ಸರ್ಕಾರದ ಕಾಲದ ಆರ್ಥಿಕ ಸ್ಥಿತಿ ಕುರಿತು ವಿಧಾನಮಂಡಲದಲ್ಲಿ ಶ್ವೇತಪತ್ರ ಮಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ತಮ್ಮ ವಾಗ್ದಾಳಿಯನ್ನು ಕುಮಾರಸ್ವಾಮಿಗೂ ವಿಸ್ತರಿಸಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಾತನಾಡುವಾಗ ಮೈತ್ರಿ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದಿರುವುದು ವಿಧಾನಮಂಡಲದ ದಾಖಲೆಯಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ. ಈಗ ತಮ್ಮ ಹೇಳಿಕೆ ಬದಲಿಸುವ ಮೂಲಕ ಅವರು ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಎಂದು ಹೇಳಿದ್ದಾರೆ. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೂಡ ಸಿಎಂ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ಹಾಗೇ ವಿದ್ಯುತ್ ಕೊರತೆ ಬಗ್ಗೆಯೂ ಮಾತನಾಡಿರುವ ಸಿಎಂ ವಿದ್ಯುತ್ ಅಭಾವ ಹಾಗೂ ಸಮ್ಮಿಶ್ರ ಸರ್ಕಾರ ಬಿದ್ದಿದ್ದಕ್ಕೆ ಕಾರಣ ಏನು ಎಂಬುದನ್ನೂ ಸಿಎಂ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 2019-23ರ ಅವಧಿಯಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಬರ ಬಂದಿರುವುದರಿಂದ ವಿದ್ಯುತ್ ತೊಂದರೆಯಾಗಿರುವುದಕ್ಕೆ ಅವರೇ ಕಾರಣ. 16,000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯನ್ನು ನಾವು ಮಾಡಿದ್ದೆವು. ನವೀಕರಿಸಬಹುದಾದ ಇಂಧನ ಮೂಲಗಳ ಸದ್ಬಳಕೆಗೆ ಹಿಂದಿನ ಸರ್ಕಾರ ಒತ್ತು ನೀಡಿದ್ದರೆ ಪರಿಸ್ಥಿತಿ ಬೇರೆಯದೆ ಇರುತ್ತಿತ್ತು. ಎನ್ನುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ತನ್ನ ಸರಕಾರವನ್ನು ಸಮರ್ಥಿಸಿದ ಸಿದ್ದರಾಮಯ್ಯ, ವಿದ್ಯುತ್ ಕ್ಷಾಮ ನೀಗಿಸಲು ಹೊರಗಿನಿಂದ ವಿದ್ಯುತ್ ಕೊಳ್ಳುತ್ತಿದ್ದೇವೆ. ಎಲ್ಲಾ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುತ್ತಿದ್ದು, ಅಲ್ಲಿ ಕೋಜನರೇಷನ್ ನಿಂದ ಉತ್ಪಾದನೆ ಆಗುವ ವಿದ್ಯುತನ್ನು ಕೊಂಡುಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಸಂಸ್ಥೆಗಳು ರಾಜ್ಯಕ್ಕೆ ನೀಡಬೇಕೆಂದು ಆದೇಶ ಹೊರಡಿಸಿದ್ದೇವೆ. ವಿದ್ಯುತ್ ಕೊರತೆ ನೀಗಿಸಲು ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೀಗ ಸಿಎಂ ನೀಡಿದ ವಿವರಣೆಗೆ ವಿರೋಧ ಪಕ್ಷಗಳ ನಾಯಕರು ಯಾವ ರೀತಿ ರಿಯಾಕ್ಷನ್ ಕೊಡ್ತಾರೆ ಎಮಧೂ ಕಾದು ನೋಡಬೇಕಿದೆ.