Home ರಾಜ್ಯ ಆ್ಯಂಬುಲೆನ್ಸ್‌’ಗಳ ಸುಗಮ ಸಂಚಾರಕ್ಕೆ ಸೆನ್ಸಾರ್‌ ಟ್ರಾಫಿಕ್‌ ಸಿಗ್ನಲ್‌: ಡಾ.ಎಂ.ಎ.ಸಲೀಂ

ಆ್ಯಂಬುಲೆನ್ಸ್‌’ಗಳ ಸುಗಮ ಸಂಚಾರಕ್ಕೆ ಸೆನ್ಸಾರ್‌ ಟ್ರಾಫಿಕ್‌ ಸಿಗ್ನಲ್‌: ಡಾ.ಎಂ.ಎ.ಸಲೀಂ

ಬೆಂಗಳೂರು: ಆ್ಯಂಬುಲೆನ್ಸ್‌’ಗಳ ಸುಗಮ ಸಂಚಾರಕ್ಕಾಗಿ ನಗರದಲ್ಲಿ ಸೆನ್ಸಾರ್‌ ಮಾದರಿಯ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ ಎಂ.ಎ.ಸಲೀಂ ತಿಳಿಸಿದ್ದಾರೆ.

ರಸ್ತೆ ಬಳಕೆದಾರರ ಸುಗಮ ಸಂಚಾರ ಹಾಗೂ ಸುರಕ್ಷತೆಗಾಗಿ ನಗರ ಸಂಚಾರ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023’ ಅಂಗವಾಗಿ ಕಬ್ಬನ್ ಪಾರ್ಕ್ ನಲ್ಲಿ ನಡೆದ ರಸ್ತೆ ಸುರಕ್ಷತಾ ಜಾಥಾದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಮೊದಲ ಹಂತದಲ್ಲಿ 163 ಅಡಾಪ್ಟೀವ್‌ ಸಿಗ್ನಲ್‌ ಲೈಟ್ಸ್‌ ಖರೀದಿಸಲು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌’ಡಿಸಿಎಲ್‌)ಕ್ಕೆ ಡಿಪಿಆರ್‌ ನೀಡಲಾಗಿದೆ. ಇನ್ನು 2-3 ತಿಂಗಳಲ್ಲಿ ಕೆಆರ್‌’ಡಿಸಿಎಲ್‌ ಈ ಅಡಾಪ್ಟೀವ್‌ ಸಿಗ್ನಲ್‌ ಲೈಟ್ಸ್‌ ಖರೀದಿ ಪ್ರಕ್ರಿಯೆ ಮುಗಿಸಲಿದೆ ಎಂದರು.

ಬಳಿಕ ನಿಗದಿತ ಜಂಕ್ಷನ್‌, ರಸ್ತೆಗಳಲ್ಲಿ ಈ ಸಿಗ್ನಲ್‌ ಲೈಟ್ಸ್‌ ಅಳಡಿಸಲಾಗುವುದು. ಈ ಸೆನ್ಸಾರ್‌ ಮಾದರಿಯ ಅಡಾಪ್ಟೀವ್‌ ಸಿಗ್ನಲ್‌ ಅಳವಡಿಕೆಯಿಂದ ಆ್ಯಂಬುಲೆನ್ಸ್‌ 200 ಮೀಟರ್‌ ದೂರದಲ್ಲಿ ಇರುವಾಗಲೇ ಅದನ್ನು ಗುರುತಿಸಿ ಸ್ವಯಂಚಾಲಿತವಾಗಿ ಸಿಗ್ನಲ್‌’ಗಳು ಹತ್ತಿಕೊಂಡು ಆ್ಯಂಬುಲೆನ್ಸ್‌ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಲಿದೆ ಎಂದು ಹೇಳಿದರು.

ಕಳೆದ ವರ್ಷ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ 1 ಕೋಟಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಕೇಸ್‌ ಹಾಗೂ ದಂಡ ವಿಧಿಸುವುದೇ ಪರಿಹಾರವಿಲ್ಲ. ಜನರ ಮನಸಿನಲ್ಲಿ ಕಾನೂನು ಪಾಲನೆ ಮೂಡಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ರಸ್ತೆಗಳಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ಅಲ್ಲಿನ ಜನರೇ ಸ್ವಯಂಪ್ರೇರಿತರಾಗಿ ಸಂಚಾರ ನಿಯಮ ಪಾಲಿಸುತ್ತಾರೆ ಎಂದು ಸಲೀಂ ಹೇಳಿದರು.

ಇದಕ್ಕೂ ‌ಮುನ್ನ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು, ರಸ್ತೆ ಸುರಕ್ಷತೆ ಎಂಬುದು ಒಂದು ವಾರಕ್ಕೆ ಮಾತ್ರ ಸೀಮಿತವಾಗಬಾರದು. ಇಡೀ ವರ್ಷ ರಸ್ತೆ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಶಾಲಾ ಮಕ್ಕಳ ಮುಖಾಂತರ ಅವರ ಪೋಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದರು. 

ರಾಲಿಯಲ್ಲಿ ನಗರದ ವಿವಿಧ ಶಾಲೆಗಳ ಸುಮಾರು 1500 ವಿದ್ಯಾರ್ಥಿಗಳು, ಸಂಚಾರ ಪೊಲೀಸರು, ಟ್ರಾಫಿಕ್‌ ವಾರ್ಡನ್‌ಗಳು ಭಾಗವಹಿಸಿದ್ದರು.

ಕಬ್ಬನ್‌ ಪಾರ್ಕ್ ನಿಂದ ಆರಂಭವಾದ ಜಾಥಾ, ಕ್ವೀನ್ಸ್‌ ಸರ್ಕಲ್‌ ಮುಖಾಂತರ ಎಂ.ಜಿ. ರಸ್ತೆಯಲ್ಲಿ ಸಾಗಿ ಕಾವೇರಿ ಆರ್ಟ್ಸ್ ಆ್ಯಂಡ್‌ ಕ್ರಾಫ್ಟ್‌, ಓಪೆರಾ ಜಂಕ್ಷನ್‌, ರೆಸಿಡೆನ್ಸಿ ರಸ್ತೆ, ಸುಲೇವಾನ್‌ ಹಾಕಿ ಕ್ರೀಡಾಂಗಣದಲ್ಲಿ ಅಂತ್ಯವಾಯಿತು.

ಈ ಜಾಥಾಯಲ್ಲಿ ವಿದ್ಯಾರ್ಥಿಗಳ ಜತೆಗೆ ಆಟೋರಿಕ್ಷಾ, ಕ್ಯಾಬ್‌, ಲಾರಿ, ಬಸ್ಸುಗಳ ಚಾಲಕರು ಹಾಗೂ ವಾಹನ ತರಬೇತಿ ಶಾಲೆಯ ಮುಖ್ಯಸ್ಥರು ಭಾಗವಹಿಸಿದ್ದರು. ವಾಹನ ಚಾಲನೆ ವೇಳೆ ಸಂಚಾರ ನಿಯಮ ಪಾಲಿಸುವಂತೆ ಭಿತ್ತಿ ಫಲಕ ಪ್ರದರ್ಶಿಸಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ಸೇರಿದಂತೆ ಹಲವು ಅಧಿಕಾರಿಗಳಿದ್ದರು.

Join Whatsapp
Exit mobile version