Home ಟಾಪ್ ಸುದ್ದಿಗಳು ನವ ಭಾರತ ನಿರ್ಮಾಣದ ಹೆಸರಿನಲ್ಲಿ ದೇಶವನ್ನು ಮಾರಲಾಗುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ನವ ಭಾರತ ನಿರ್ಮಾಣದ ಹೆಸರಿನಲ್ಲಿ ದೇಶವನ್ನು ಮಾರಲಾಗುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಭಾರತವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ

ಸಂವಿಧಾನದ ಆಶಯವನ್ನು ಸಂರಕ್ಷಿಸಲು ಪಣತೊಡೋಣ

ನವದೆಹಲಿ: ನವ ಭಾರತದ ಹೆಸರಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ದೇಶವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳಿಗೆ ಮಾರಾಟ ಮಾಡುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಪ್ರಸಕ್ತ ದೇಶವು ಸಂಕಷ್ಟದಲ್ಲಿದ್ದು, ಕಾಂಗ್ರೆಸ್ ನಿರ್ಮಾಣ ಮಾಡಿದ ದೇಶದ ಗಣರಾಜ್ಯ ವ್ಯವಸ್ಥೆಯನ್ನು ಇಂದು ಬದಲಾಯಿಸುವ ಚಿಂತನೆ ನಡೆಸಲಾಗುತ್ತಿದೆ. ದೇಶದಲ್ಲಿ ಇಂತಹ ರಾಜಕೀಯ ಪರಿಸ್ಥಿತಿ ಬರಲಿದೆ ಎಂದು ಯಾರೂ ಊಹಿಸಿರಲಿಲ್ಲ. ದೇಶದಲ್ಲಿ ಸುಳ್ಳನ್ನೇ ಪ್ರಚಾರಪಡಿಸಲಾಗುತ್ತಿದೆ ಮತ್ತು ಅಧಿಕಾರದಲ್ಲಿರುವವರು ಗಣರಾಜ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ದೂರಿದರು.

ಆದರೆ ದೇಶದಲ್ಲಿ ಹರಡಲಾಗುತ್ತಿರುವ ಸುಳ್ಳು, ಮೋಸ, ವಂಚನೆ, ದ್ವೇಷದ ರಾಜಕೀಯವನ್ನು ಕಾಂಗ್ರೆಸ್ ಪಕ್ಷ ವಿಫಲಗೊಳಿಸಲಿದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಭಾರತದ ಸಂವಿಧಾನದ ಆಶಯವನ್ನು ಸಂರಕ್ಷಿಸುವುದಾಗಿದೆ. ಇದನ್ನು ದೇಶದ ಕೋಟ್ಯಂತರ ನಾಗರಿಕರು ಒಪ್ಪಿಕೊಳ್ಳುತ್ತಾರೆ. ಈ ಜನರು ಕೇವಲ ಹೆಸರಿಗಾಗಿ ಕಾಂಗ್ರೆಸ್ ನೊಂದಿಗೆ ಸೇರಿಲ್ಲ, ಬದಲಾಗಿ ದೇಶದ ಗಣರಾಜ್ಯವನ್ನು ಸಂರಕ್ಷಿಸಲು ಬಯಸಿ, ಪಕ್ಷದೊಂದಿಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಈ ದೇಶದ ಸಂವಿಧಾನ, ಗಣರಾಜ್ಯವನ್ನು ಸಂರಕ್ಷಿಸಲು ಕಾಂಗ್ರೆಸ್ ಅಧ್ಯಕ್ಷ ಎಂಬ ನೆಲೆಯಲ್ಲಿ ನಾನು ದೇಶದ ಜನತೆಯಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ದೇಶವನ್ನು ಬಲಪಡಿಸುವುದಕ್ಕೆ ಸಮಾನವಾಗಿದೆ. ಕಾಂಗ್ರೆಸ್ ಪಕ್ಷವು 137 ವರ್ಷಗಳಿಂದ ದೇಶದ ಜನರ ಜೀವನದ ಒಂದು ಭಾಗವಾಗಿದೆ. ರಾಹುಲ್ ಗಾಂಧಿ ಅವರು ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ಸಂಕಷ್ಟವನ್ನು ಬದಿಗಿಟ್ಟು ದೇಶದೆಲ್ಲೆಡೆ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿದ್ದಾರೆ. ಅವರು ಜನರೊಂದಿಗೆ ಸೇರುತ್ತಿದ್ದಾರೆ, ಸಮಾಲೋಚನೆ ನಡೆಸುತ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಎಲ್ಲ ನಾಯಕರು ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು ದೇಶದ ಮೂಲೆ ಮೂಲೆಗೆ ತಲುಪಿಸಬೇಕು ಎಂದು ಖರ್ಗೆ ಕರೆ ನೀಡಿದರು.

“ನನ್ನ ಕಾಂಗ್ರೆಸ್ ಒಡಹುಟ್ಟುಗಳಿಗೆ ಅಧ್ಯಕ್ಷನಾಗಿ ನಾನು ಕೊಡುವ ಮೊದಲ ಕರೆಯೆಂದರೆ ಆರ್ಥಿಕ ಸಮಾನತೆ, ಸಂವಿಧಾನದ ಮೌಲ್ಯಗಳ ರಕ್ಷಣೆ, ಕೋಮು ಸೌಹಾರ್ದ, ಯುವ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು. ಈ ನಿಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆಯ ಮೌಲ್ಯವನ್ನು ಭಾರತದ ಎಲ್ಲ ಮೂಲೆಗಳಿಗೂ ಮುಟ್ಟಿಸಬೇಕು” ಎಂದರು.

“ಭಾರತದ ಜನರಿಗೆ ಕಾಂಗ್ರೆಸ್ ಮಾಡಿರುವ ಮತ್ತು ಮಾಡಬಯಸುವ ಕೆಲಸದ ಬಗ್ಗೆ ಹೇಳೋಣ. ನಾವು ಅವರ ದನಿಯಾಗಲಿದ್ದೇವೆ ಎಂಬುದನ್ನು ಜನರಿಗೆ ತಿಳಿಸಿರಿ. ನಮ್ಮ ಹಿರಿಯರು ದೇಶಕ್ಕಾಗಿ ನೆತ್ತರು ಹರಿಸಿದ್ದನ್ನು, ಬೆವರು ಸುರಿಸಿದ್ದನ್ನು ತಿಳಿಸಿರಿ. ಆ ಭಾರತವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಅವರು ಕರೆ ನೀಡಿದರು.

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, “ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಹಸಿವು, ಮಾಲಿನ್ಯ ಹೆಚ್ಚಿದರೆ, ರೂಪಾಯಿ ಬೆಲೆ ತಗ್ಗುತ್ತಿದೆ, ಇದು ನವ ಭಾರತವೇ” ಎಂದು ಪ್ರಶ್ನಿಸಿದರು.

“ದೇಶವನ್ನು ಹಾಳು ಮಾಡುತ್ತಿರುವವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇರುವವರೆಗೆ ಅವರು ಅದನ್ನು ಮಾಡುವುದು ಸಾಧ್ಯವಿಲ್ಲ. ನಾವು ಅದು ಸಾಧ್ಯವಾಗಲು ಬಿಡುವುದಿಲ್ಲ. ನಾವು ನಿರಂತರ ಹೋರಾಡುತ್ತೇವೆ” ಎಂದು ಖರ್ಗೆ ಹೇಳಿದರು.

ಇದಕ್ಕೂ ಮೊದಲು ಖರ್ಗೆ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದ ಸೋನಿಯಾ ಗಾಂಧಿ, ಈಗ ನಾನು ನಿರಾಳಲಾಗಿದ್ದೇನೆ ಎಂದು ಹೇಳಿದರು.

ಪಕ್ಷದ ಅಧ್ಯಕ್ಷೆಯಾಗಿ ನನ್ನ ಕೈಲಾದ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ. ಈಗ ಆ ಜವಾಬ್ದಾರಿಯನ್ನು ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರಿಗೆ ವಹಿಸಿ ನಿರಾಳಲಾಗಿದ್ದೇನೆ ಎಂದು ಸೋನಿಯಾ ಗಾಂಧಿ ಹೇಳಿದರು.

ಇದಕ್ಕೂ ಮೊದಲು ಖರ್ಗೆ ಇಂದು ಬೆಳಿಗ್ಗೆ ಮಹಾತ್ಮಾ ಗಾಂಧೀಜಿಯವರ ಮತ್ತು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಭೂಮಿಗಳಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಬಳಿಕ ಅಧಿಕಾರ ಸ್ವೀಕರಿಸಿದರು.

Join Whatsapp
Exit mobile version