Home ಟಾಪ್ ಸುದ್ದಿಗಳು ಯುಗಾದಿ ಹಬ್ಬದ ದಿನ ನೈಜ ಹಿಂದುಗಳು ಯಾರೂ ಮಾಂಸ ಮಾರುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ ಕಿಡಿ

ಯುಗಾದಿ ಹಬ್ಬದ ದಿನ ನೈಜ ಹಿಂದುಗಳು ಯಾರೂ ಮಾಂಸ ಮಾರುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಯುಗಾದಿ ಹಬ್ಬದ ದಿನ ನೈಜ ಹಿಂದುಗಳು ಯಾರೂ ಮಾಂಸ ಮಾರುವುದೂ ಇಲ್ಲ, ಖರೀದಿಸುವುದೂ ಇಲ್ಲ. ಆದರೆ, ಜಟ್ಕಾ ಕಟ್ ಹೆಸರಿನಲ್ಲಿ ಕೆಲವರು ಇವತ್ತೇ ಮಾಂಸದ ಅಂಗಡಿಗಳನ್ನು ತೆರೆದಿದ್ದಾರೆ! ಇವರಾ ಹಿಂದುಗಳು? ʼಇಂಡಿಯಾದಿಂದಲೇ ಹಿಂದೂ ಧರ್ಮವನ್ನು ಮೂಲೋತ್ಪಾಟನೆ ಮಾಡುವುದೇ ಇವರ ಹಿಡನ್ ಅಜೆಂಡಾ ಆಗಿದೆʼ ಎಂದು ಸಂಘಪರಿವಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳ ಕುರಿತು ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ಯುಗಾದಿ ಪರ್ವದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ ಎಂದು ಸಾಂದರ್ಭಿಕವಾಗಿ ನುಡಿದಿದ್ದಾರೆ.

ಸಂಘಪರಿವಾರದವರು ಕುರ್ಚಿ ಹಿಡಿಯಲು ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ʼಹಿಂದುತ್ವದ ವಿನಾಶʼ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ ಎಂದು ಒತ್ತಾಯಿಸಿದ್ದಾರೆ.

ತಲೆತಲಾಂತರಗಳಿಂದ ಯುಗಾದಿ ಇದೆ, ವರ್ಷತೊಡಕೂ ಇದೆ, ಹಲಾಲೂ ಇದೆ. ಈಗ ʼಹಲಾಲ್ ಹಾಲಾಹಲʼವನ್ನುಸೃಷ್ಟಿಸಲಾಗಿದೆ. ಹಲಾಲು, ಜಟ್ಕಾ ಎಂದು ಜನರನ್ನು ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದು ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲ ಎಂದು ಕಿಡಿಕಾರಿದ್ದಾರೆ.

ತಲೆತಲಾಂತರಗಳಿಂದ ಇಲ್ಲದ ʼಆಹಾರ ತಾರತಮ್ಯʼ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ʼರೋಡ್ ಮ್ಯಾಪ್ʼ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ; ಅಂದರೆ, ʼಸರ್ವೇ ಜನಾಃ ಸುಖಿನೋ ಭವಂತುʼ ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ ಎಂದು ಸಂಘಪರಿವಾರವನ್ನು ಛೇಡಿಸಿದ್ದಾರೆ.

ಅನ್ನ-ಆಹಾರದಲ್ಲಿ ಅರಾಜಕತೆ ಉಂಟು ಮಾಡಿ ಬೇಳೆ ಬೇಯಿಸಿಕೊಳ್ಳುವವರು ʼಭಾರತಕ್ಕೆ ಮತ್ತು ಭಾವೈಕ್ಯ ಪರಂಪರೆಗೆ ದೊಡ್ಡ ಅಪಾಯ.ʼ ಮನಸುಗಳ ನಡುವೆ ಯುದ್ಧವನ್ನೇ ಸೃಷ್ಟಿಸುತ್ತಿರುವ ಈ ಕಿಡಿಗೇಡಿಗಳು ಯುದ್ಧೋನ್ಮಾದ ಸರ್ವಾಧಿಕಾರಿಗಳಿಗಿಂತಲೂ ವಿನಾಶಕಾರಿ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಅನಾದಿ ಕಾಲದಿಂದ ಯುಗಾದಿ, ವರ್ಷತೊಡಕನ್ನು ನಾವೆಲ್ಲರೂ ಆಚರಿಸಿದಂತೆ, ಈ ವರ್ಷವೂ ಆಚರಿಸೋಣ. ʼಭಾರತವನ್ನು ಒಡೆಯುವ ವಿಷಬೀಜಾಸುರರನ್ನು ಹಿಮ್ಮೆಟ್ಟಿಸೋಣ.ʼ ಸರ್ವ ಜನಾಂಗದ ತೋಟ ಕರುನಾಡಿನಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಮನವಿ ಇದು. ಇಡೀ ದೇಶಕ್ಕೆ ಮಾದರಿಯಾದ ನೆಮ್ಮದಿಯ ಕರುನಾಡನ್ನು ಕಾಪಾಡಿಕೊಳ್ಳೋಣ ಎಂದು ಆಗ್ರಹಿಸಿದ್ದಾರೆ.

ಕರ್ನಾಟಕವು ಎಲ್ಲರನ್ನೂ ಒಳಗೊಳ್ಳುವ ಶುದ್ಧ ಅಂತಃಕರಣದ ಮನಸುಗಳದ್ದು. ಭಾವನೆಗಳ ಕೆಂಡದ ಮಳೆ ಸುರಿಸುವ ಕಿರಾತಕರದ್ದಲ್ಲ. ಜನಪೀಡಕರನ್ನು ತಿರಸ್ಕರಿಸೋಣ. ಪರಂಪರಾಗತವಾಗಿ ಬಂದಿರುವ ಯುಗಾದಿ, ವರ್ಷತೊಡಕನ್ನು ಎಂದಿನಂತೆ ಸಂಭ್ರಮಿಸುವ ಮೂಲಕ ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ ಎಂದು ಹಾರೈಸಿದ್ದಾರೆ.

Join Whatsapp
Exit mobile version