ಬೆಂಗಳೂರು: ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹೊಸದಾಗಿ ಪರಿಚಯಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಹೊಸ ಪಠ್ಯ ಪುಸ್ತಕದಲ್ಲಿ ಪುಸ್ತಕ ರಚನಾ ಸಮಿತಿಯು ವಿಶ್ವವೇ ಭಯಪಡುವ ಕ್ಯಾನ್ಸರ್, ಏಡ್ಸ್ ನಂತಹ ಮಾರಕ ಕಾಯಿಲೆಗೆ ಸ್ವಮೂತ್ರ ಪಾನವೇ ಮದ್ದು ಎಂದು ಉಲ್ಲೇಖಿಸಿದ್ದು, ತೀವ್ರ ಅಪಹಾಸ್ಯಕ್ಕೆ ಗುರಿಯಾಗಿದೆ.
ಮೈಸೂರು ವಿಶ್ವವಿದ್ಯಾನಿಲಯ ದ ಪಠ್ಯಕ್ರಮದಲ್ಲಿ, ಪದವಿ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಏಡ್ಸ್ ಹಾಗೂ ಕ್ಯಾನ್ಸರ್ ಗೆ ಸ್ವಮೂತ್ರ ಪಾನವೇ ಮದ್ದು ಎಂಬುದನ್ನು ಉಲ್ಲೇಖಿಸಲಾಗಿದೆ. ಸದ್ಯ ಇದು ವಿವಾದ ಪಡೆದುಕೊಂಡಿದ್ದು, ವಿದ್ಯಾರ್ಥಿ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು, ವೈದ್ಯರು ಅವೈಜ್ಞಾನಿಕ ಪಠ್ಯಕ್ರಮದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಪದವಿ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಏಡ್ಸ್, ಕ್ಯಾನ್ಸರ್ ಗೆ ಸ್ವಮೂತ್ರ ಪಾನವೇ ಮದ್ದು ಎಂದು ಹೇಳಿರುವುದು ಅತ್ಯಂತ ಅವೈಜ್ಞಾನಿಕ ಮತ್ತು ಮೂರ್ಖತನದ ಪರಮಾವಧಿ ಎಂದು ಟೀಕಿಸಲಾಗಿದೆ.
ಸ್ವಮೂತ್ರ ಪಾನ, ಮೂತ್ರ ಲೇಪನದಿಂದ ಏಡ್ಸ್, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂದು ಉಲ್ಲೇಖಿಸಿದೆ. ಸ್ವಮೂತ್ರಪಾನವಲ್ಲದೆ ಗೋಮೂತ್ರದ ಮಹತ್ವವನ್ನೂ NEP ಶಿಕ್ಷಣ ನೀತಿಯ ಹೊಸ ಪಠ್ಯದಲ್ಲಿ ಅಳವಡಿಸಿದ್ದು, ಪವಿತ್ರ ವೈದ್ಯ ಪದ್ಧತಿ ಅಧ್ಯಾಯದ ಪ್ರಕೃತಿ ಚಿಕಿತ್ಸೆ ಪಾಠದಲ್ಲಿ ಗೋಮೂತ್ರ ಚಿಕಿತ್ಸೆಯ ವಿಧಾನಗಳನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಹಿಂದೂಗಳಲ್ಲಿ ಗೋಮೂತ್ರ ಸೇವನೆ ಪವಿತ್ರವಾದುದು. ಇದು ಕ್ಯಾನ್ಸರ್, ಮೈಗ್ರೇನ್, ಆಸ್ತಮಾ, ಅರ್ಥ್ರೈಟಿಸ್, ಮಧುಮೇಹ ಮೊದಲಾದ ರೋಗಗಳನ್ನು ನಿವಾರಣೆ ಮಾಡುತ್ತದೆ. ಗೋಮೂತ್ರದಿಂದ ಕಣ್ಣು ಗಳನ್ನು ತೊಳೆದುಕೊಂಡಾಗ ಸುತ್ತಲೂ ಇರುವ ಕಪ್ಪುಕಲೆಗಳು ಇಲ್ಲವಾಗುತ್ತವೆ. ಕಣ್ಣಿನ ಜ್ಯೋತಿಯ ಹೊಳಪು ಹೆಚ್ಚಾಗುತ್ತದೆ ಎಂದೂ ವಿವರಿಸಲಾಗಿದೆ.
ಅವೈಜ್ಞಾನಿಕ ಪಠ್ಯಕ್ರಮವನ್ನು ಹಿಂಪಡೆಯಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.