ಭುವನೇಶ್ವರ: ಭದ್ರತಾ ಸಿಬ್ಬಂದಿಯೊಬ್ಬ ಒಡಿಶಾದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚುಚ್ಚುಮದ್ದು ನೀಡಿದ್ದು, ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಒಡಿಶಾದ ಅಂಗುಲ್ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಯೊಬ್ಬರ ಸಂಬಂಧಿ ಈ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಟೆಟನಸ್ ಚುಚ್ಚುಮದ್ದು ಪಡೆಯಲು ಬಂದ ರೋಗಿಗೆ ಭದ್ರತಾ ಸಿಬ್ಬಂದಿಯೊಬ್ಬ ಚುಚ್ಚುಮದ್ದು ನೀಡಿದ್ದಾನೆ. ರೋಗಿಗಳಿಗೆ ಚುಚ್ಚುಮದ್ದು ನೀಡಲು ವೈದ್ಯರು, ದಾದಿಯರು ಯಾರೂ ಇರಲಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಸಿಸ್ಟೆಂಟ್ ಚೀಫ್ ಮೆಡಿಕಲ್ ಸೂಪರಿಡೆಂಟ್ ಮಾನಸ್ ರಾಜನ್ ಬಿಸ್ವಾಲ್ ಹೇಳಿದ್ದಾರೆ.
ರಾಜ್ಯದಲ್ಲಿ ಇಂತಹ ಘಟನೆಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅಥವಾ ವೈದ್ಯರಿಗೆ ಸಹಾಯ ಮಾಡಲು ಆರೋಗ್ಯೇತರ ಕಾರ್ಯಕರ್ತರನ್ನು ನಿಯೋಜಿಸಬೇಡಿ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮೊಹಾಪಾತ್ರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದಾರೆ.