ನಾಗ್ಪುರ: ಮಳೆಯಿಂದಾಗಿ 8 ಓವರ್‌ಗಳಿಗೆ ಸೀಮಿತಗೊಂಡಿದ್ದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಆ ಮೂಲಕ ತಲಾ ಒಂದು ಗೆಲುವಿನೊಂದಿಗೆ, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದು, ಅಂತಿಮ ಪಂದ್ಯ ಸೆಪ್ಟಂಬರ್ 25ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 90 ರನ್‌ಗಳಿಸಿತ್ತು. ಸವಾಲಿನ ಗುರಿ ಪಡೆದ ಭಾರತ, ರೋಹಿತ್ ಶರ್ಮಾ ಗಳಿಸಿದ 46 ರನ್‌ಗಳ ನೆರವಿನಿಂದ ಗೆಲುವಿನತ್ತ ಮುನ್ನಡೆಯಿತು.
ಆರಂಭಿಕ ಕೆ.ಎಲ್..ರಾಹುಲ್ 10 ರನ್, ವಿರಾಟ್ ಕೊಹ್ಲಿ 11 ರನ್, ಹಾರ್ದಿಕ್ ಪಾಂಡ್ಯ 9 ರನ್‌ಗಳಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಎರಡು ಎಸೆತಗಳಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಗೆಲುವಿನ ಗುರಿ ಮುಟ್ಟಿಸಿದರು.
ಇದಕ್ಕೂ ಮೊದಲು ಸಂಜೆ 7 ಗಂಟೆಗೆಆರಂಭವಾಗಬೇಕಿದ್ದ ಪಂದ್ಯ, ಮಳೆಯಿಂದಾಗಿ ಮುಂದೂಡಲ್ಪಟ್ಟು ರಾತ್ರಿ 9.30ಕ್ಕೆ ಆರಂಭವಾಗಿತ್ತು. ಟಿ20 ಪಂದ್ಯ ಆರಂಭವಾಗಲು ತಡವಾದ ಕಾರಣ ಓವರ್‌ಗಳ ಸಂಖ್ಯೆಯನ್ನು 8 ಕ್ಕೆ ಇಳಿಸಲಾಗಿತ್ತು.