ಕಡಬ: ತಾಲೂಕಿನ ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯಿಮನ ನಿವಾಸಿ, ಬೀದಿ ಬದಿ ವ್ಯಾಪಾರಿ ಅಬ್ದುಲ್ ರಝಾಕ್ ಎಂಬವರ ತಳ್ಳುಗಾಡಿಯನ್ನು ಬುಲ್ದೊಝರ್ ಮೂಲಕ ಧ್ವಂಸಗೊಳಿಸಿದ ಪಂಚಾಯತ್ ಸರ್ವಾಧಿಕಾರವನ್ನು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಶಮೀಮ್ ಬೆಳ್ತಂಗಡಿ ತೀವ್ರವಾಗಿ ಖಂಡಿಸಿದ್ದಾರೆ
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಹಲವಾರು ವರ್ಷಗಳಿಂದ ಊರ ನಾಗರಿಕರ ಸಂಪೂರ್ಣ ಸಹಕಾರದಲ್ಲಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಾ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಕಾಲು ಮುರಿದು ಮನೆಯಲ್ಲಿರುವ ತಾಯಿ ಅಂಗವೈಕಲ್ಯದಿಂದಿರುವ ಮಗುವಿನೊಂದಿಗೆ ಕುಟುಂಬ ಸಮೇತ ಸಂಕಷ್ಟದಿಂದ ಜೀವನ ನಡೆಸುವ ಅಬ್ದುಲ್ ರಝಾಕ್ ರವರ ಬದುಕುವ ದಾರಿಯನ್ನೇ ಪಂಚಾಯತ್ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕಾದ ಗ್ರಾಮ ಪಂಚಾಯತ್ ಜನರ ಬದುಕುವ ಹಕ್ಕನ್ನೇ ಕಸಿಯುವುದಕ್ಕೆ ಅವಕಾಶ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಸ್ಥಳೀಯ ಉನ್ನತ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಗಳು ಹಾಗೂ ಬೀದಿ ಬದಿ ವ್ಯಪಾರಿಗಳ ಸಮಿತಿಯನ್ನು ಕಡ್ಡಾಯವಾಗಿ ರಚಿಸಲು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಬೀದಿ ಬದಿ ವ್ಯಾಪಾರಿಗಳ ಬದುಕು ಕಟ್ಟಲು ನೀಡಿರುವ ನಿರ್ದೇಶನವಾಗಿದೆ. ಆದರೂ ಮಾನವೀಯತೆಯೇ ಇಲ್ಲದ ಪಂಚಾಯತ್ ಅಧಿಕಾರಿಗಳ ಈ ಸರ್ವಾಧಿಕಾರಕ್ಕೆ ಜಿಲ್ಲಾಧಿಕಾರಿಗಳು ತಡೆ ನೀಡಬೇಕು. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಬಡ ಬೀದಿ ಬದಿ ವ್ಯಪಾರಿ ರಝಾಕ್ ರವರಿಗೆ ಬದುಕು ಕಟ್ಟಲು ಅವಕಾಶ ಮಾಡಿಕೊಡಬೇಕು. ಅಲ್ಲಿ ಹಲವು ಬೀದಿ ಬದಿ ವ್ಯಾಪಾರಿಗಳು ಇದ್ದರೂ ಪಂಚಾಯತ್ ಪರವಾನಿಗೆಯಿಂದಲೇ ವ್ಯಾಪಾರ ಮಾಡುತ್ತಿರುವ ರಝಾಕ್ ರವರನ್ನೇ ಗುರಿಯಾಗಿಸಿದ್ದು ಯಾಕೆ? ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆಗೊಳಪಡಿಸಿ ನೋಟಿಸ್ ನೀಡದೆ ಏಕಾಏಕಿ ತಳ್ಳುಗಾಡಿಯನ್ನು ಧ್ವಂಸಗೊಳಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲ ಸಂತ್ರಸ್ತ ರಝಾಕ್ ರವರ ಪರ ನಾಡಿನ ರೈತ ಸಂಘಟನೆಯ ಪ್ರಮುಖರು ಮತ್ತು ನಾಗರಿಕರು ಧ್ವನಿಯಾಗಿದ್ದನ್ನು SDTU ಈ ಸಂದರ್ಭದಲ್ಲಿ ಶ್ಲಾಘಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.