ಮಂಗಳೂರು: ಅಡಕೆ ಆಮದು ನಿಷೇಧ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ ಮಾರ್ಚ್ 07 ದ.ಕ ಜಿಲ್ಲೆಯ ಎಲ್ಲಾ ರೈತ ಸಂಘಗಳು ಒಟ್ಟು ಸೇರಿ ಮಧ್ಯಾಹ್ನ 2.30 ಕ್ಕೆ ಬಿಸಿರೋಡ್ ನಿಂದ ನಡೆಸುವ ಬೃಹತ್ ಟ್ರಾಕ್ಟರ್ ಜಾಥಾ ಹಾಗೂ ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ನಡೆಸುವ ಬೃಹತ್ ಪ್ರತಿಭಟನಾ ಸಭೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ದ.ಕ ಜಿಲ್ಲಾ ಉಪಾಧ್ಯಕ್ಷ ಹಾಗೂ ರೈತ ಮುಖಂಡ ವಿಕ್ಟರ್ ಮಾರ್ಟಿಸ್ ತಿಳಿಸಿದ್ದಾರೆ.
ವಿದೇಶದಿಂದ ಅಡಕೆ ಹಾಗೂ ತೆಂಗು ಆಮದನ್ನು ತಡೆಯಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ದ.ಕ. ಜಿಲ್ಲೆಯಲ್ಲಿ ಅಡಕೆ ಬೆಲೆ ಹಾಗೂ ತೆಂಗಿನ ಬೆಲೆ ಕುಸಿತ ಕಂಡು ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಇರುವ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ ಸೇರಿದಂತೆ ಹಲವು ಕಾರಣಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ವಿದೇಶದಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಕಡಿಮೆ ಬೆಲೆಗೆ ಆಮದು ಮಾಡಿ ಇಲ್ಲಿನ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಹೊರ ರಾಜ್ಯಗಳಿಗೆ ರಫ್ತು ಮಾಡುವುದರಿಂದ ಇಲ್ಲಿನ ಗುಣಮಟ್ಟದ ಅಡಿಕೆಗೆ ಬೆಲೆ ಕಡಿಮೆ ಆಗುವಂತೆ ಆಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ವಿದೇಶದಿಂದ ಅಕ್ರಮ ಮಾರ್ಗಗಳ ಮೂಲಕ ಆಮದಾಗುತ್ತಿರುವ ಅಡಿಕೆಯನ್ನು ನಿಯಂತ್ರಣ ಮಾಡಲು ಸಂಪೂರ್ಣವಾಗಿ ವಿಫಲವಾಗಿದೆಯಲ್ಲದೆ, 2022 ರಲ್ಲಿ ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಟನ್ ಅಡಿಕೆಯನ್ನು ಆಮದು ಮಾಡಲು ಒಪ್ಪಂದವನ್ನು ಮಾಡಿಕೊಂಡು ಈ ದೇಶದ ರೈತರ ಜೀವನದಲ್ಲಿ ಚೆಲ್ಲಾಟವಾಡಿದೆ.
ಈಗ ಉತ್ಪಾದನಾ ವೆಚ್ಚವು ಅಧಿಕವಾಗಿದ್ದು, ವಿದೇಶಿ ಅಡಿಕೆ ಆಗಮನದಿಂದ ಬೆಲೆಯು ಕುಸಿತವಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಹಾಗಾಗಿ ಅಡಿಕೆ ಹಾಗೂ ತೆಂಗಿನ ಆಮದನ್ನು ಸಂಪೂರ್ಣವಾಗಿ ನಿಷೇದಿಸಬೇಕು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕೆಂಬ ನ್ಯಾಯಯುತ ಬೇಡಿಕೆಗಳನ್ನು ಮುಂದಿರಿಸಿಕೊಂಡು ದ.ಕ ಜಿಲ್ಲೆಯ ರೈತ ಸಂಘಟನೆಗಳ ಒಕ್ಕೂಟ ನಾಳೆ ನಡೆಸುವ ಪ್ರತಿಭಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ನೈತಿಕ ಬೆಂಬಲ ನೀಡಿಕೊಂಡು ಹೋರಾಟದಲ್ಲಿ ಭಾಗಿಯಾಗಲಿದೆ ಎಂದಿದ್ದಾರೆ.
ಪಕ್ಷದ ಎಲ್ಲಾ ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗಿಯಾಗಿ, ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಬೆನ್ನೆಲುಬಾಗಿ ಇದ್ದುಕೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿಕ್ಟರ್ ಮಾರ್ಟಿಸ್ ಮನವಿ ಮಾಡಿದ್ದಾರೆ