Home ಟಾಪ್ ಸುದ್ದಿಗಳು ಸಂಸದರ ‘ಡಬ್ಬಲ್ ಇಂಜಿನ್’ ನಿಷ್ಕ್ರೀಯವಾಗಿ ನಿಂತಿದೆ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ವಾಗ್ದಾಳಿ

ಸಂಸದರ ‘ಡಬ್ಬಲ್ ಇಂಜಿನ್’ ನಿಷ್ಕ್ರೀಯವಾಗಿ ನಿಂತಿದೆ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ವಾಗ್ದಾಳಿ

ಬಂಟ್ವಾಳ: ಮಾತು ಮಾತಿಗೆ ನಮ್ಮದು ಡಬ್ಬಲ್ ಇಂಜಿನ್ ‌ಸರಕಾರ ಎಂದು ಭಾಷಣ ಬಿಗಿಯುವ ಸಂಸದ ನಳಿನ್ ಕುಮಾರ್ ಕಟೀಲು ಅವರ ಕ್ಷೇತ್ರ ಸಮಸ್ಯೆಗಳ ಗೂಡಾಗಿದ್ದು ಅವರ ಡಬ್ಬಲ್ ಇಂಜಿನ್ ನಿಷ್ಕ್ರಿಯವಾಗಿ ನಿಂತಿದೆ ಎಂದು ಎಸ್.ಡಿ.ಪಿ.ಐ. ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ

ಬಿ.ಸಿ.ರೋಡ್ ಕೈಕಂಬದ ಸುಲ್ತಾನ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ನಡೆದ ಸಮಾರಂಭದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಗೆಂದು ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಮಂಜೂರು ಮಾಡಿದರೂ ಬಿ.ಸಿ.ರೋಡ್ – ಸುರತ್ಕಲ್ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಯಾವುದೇ ನಿರ್ವಹಣಾ ಕಾರ್ಯ ನಡೆಯುತ್ತಿಲ್ಲ. ಇದರಿಂದ ವಾಹನ ಸವಾರರಿಗೆ ಹಾಗೂ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಿಯಾದ ಸರ್ವೀಸ್ ರಸ್ತೆಗಳಿಲ್ಲ. ಹೆದ್ದಾರಿ ಕಾಮಗಾರಿ ಇನ್ನೂ ಸರಿಯಾಗಿ ಪೂರ್ಣಗೊಂಡಿಲ್ಲ. ಆದರೂ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ, ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಿರುವಾಗ ಸಂಸದ ನಳಿನ್ ಕುಮಾರ್ ಕಟೀಲು ಬೇರೆ ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಅವರ ಕ್ಷೇತ್ರದ ಸಮಸ್ಯೆಗಳನ್ನು ಸರಿ ಮಾಡುವ ಸಮಯ ಇಲ್ಲ ಎಂದು ಹೇಳಿದರು.

ಬಂಟ್ವಾಳ ಶಾಸಕರ ಬಿ.ಸಿ.ರೋಡು ಸೌಂದರ್ಯದ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿದೆ. ಮಾಜಿ ಸಚಿವರ ಕಾಲದಿಂದ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿದೆ ಎನ್ನಲಾಗುತ್ತಿದೆ. ಆದರೆ ಬಂಟ್ವಾಳದಲ್ಲಿ ನೀರಿನ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದರು.

ಈ ಎಲ್ಲಾ ಸಮಸ್ಯೆಗಳನ್ನು ಕೈಗೆತ್ತಿಗೊಂಡು ಇದಕ್ಕೆ ಕಾಲಮಿತಿಯೊಳಗೆ ಪರಿಹಾರ ಮಾಡುವಂತೆ ಮನವಿ ಮಾಡಲಾಗುವುದು. ತಪ್ಪಿದಲ್ಲಿ ಪಕ್ಷದಿಂದ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಯುವ ಜನಾಂಗವನ್ನು ಕ್ರೀಡೆಯಲ್ಲಿ ಮುನ್ನಡೆಸುವ ಬಗ್ಗೆ ರಾಜ್ಯ, ಕೇಂದ್ರ ಸರಕಾರಗಳು ಹೇಳುತ್ತಿವೆ. ಆದರೆ ಬಂಟ್ವಾಳ ತಾಲೂಕಿನಲ್ಲಿ ಒಂದೇ ಒಂದು ಸಾರ್ವಜನಿಕ ಕ್ರೀಡಾಂಗಣ ಇಲ್ಲ. ಬೆಂಜನಪದವಿನಲ್ಲಿ ಕ್ರೀಡಾಂಗಣ ಮಂಜೂರಾದರೂ ಕಾಮಗಾರಿ ನಡೆಯದಿರುವುದು ದುರದೃಷ್ಟಕರ ಎಂದರು.

ಹಿಜಾಬ್ ಬಗ್ಗೆ ಪಕ್ಷದ ನಿಲುವು ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ
ಭಾಸ್ಕರ್ ಪ್ರಸಾದ್, ಯಾವುದೇ ಧರ್ಮ, ಜಾತಿಯ ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಅವರ ಹಕ್ಕಿನ ಪರ ಪಕ್ಷ ನಿಂತು ನೈತಿಕ ಬೆಂಬಲ ನೀಡಲಿದೆ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬಿಟ್ಟು ಇಂತಹ ವಿಚಾರಗಳ ಮೂಲಕ ಅಶಾಂತಿ ಸೃಷ್ಟಿ ಮಾಡಬೇಡಿ ಎಂದು ಬಿಜೆಪಿಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಅಧ್ಯಕ್ಷ ಅಬುಬಕ್ಕರ್ ಕುಳಾಯಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ಉಪಸ್ಥಿತರಿದ್ದರು.

Join Whatsapp
Exit mobile version