►► 1.25 ಕೋಟಿ ರೂಪಾಯಿ ಅನುದಾನ ಮತ್ತು 1 ಕೋಟಿ ರೂಪಾಯಿ ಉದ್ಯೋಗ ಖಾತರಿ ಯೋಜನೆಯಡಿ ಖರ್ಚು
ಬಂಟ್ವಾಳ: ಸಜೀಪ ನಡು ಗ್ರಾಮ ಪಂಚಾಯತ್ ನಲ್ಲಿ ಅಧಿಕಾರದಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಮಟ್ಟದಲ್ಲಿ ಮಾದರಿ ಗ್ರಾಮವಾಗಿ ಕಾರ್ಯನಿರ್ವಹಿಸಿದ್ದು, ಗ್ರಾಮದ ಅಭಿವೃದ್ಧಿಗಾಗಿ 1.25 ಕೋಟಿ ರೂಪಾಯಿ ಅನುದಾನ ಮತ್ತು ಉದ್ಯೋಗ ಖಾತರಿ ಯೋಜನೆಯಡಿ 1 ಕೋಟಿ ರೂಪಾಯಿ ಖರ್ಚು ಮಾಡಿದೆ. ತನ್ನ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕುರಿತು ಪಕ್ಷವು ಇತ್ತೀಚೆಗಷ್ಟೇ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ.
ಎಸ್.ಡಿ.ಪಿ.ಐ ಆಡಳಿತಾವಧಿಯಲ್ಲಿ ಗ್ರಾಮದಲ್ಲಿ ಹಲವು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ನೀರು, ದಾರಿದೀಪ, ರಸ್ತೆ ಚರಂಡಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಈ ಕುರಿತು ವಿವರಗಳನ್ನು ಕೈಪಿಡಿಯಲ್ಲಿ ಒದಗಿಸಲಾಗಿದೆ.
ರಸ್ತೆ ಅಭಿವೃದ್ಧಿಗಾಗಿ 46 ಲಕ್ಷ, ನೀರಾವರಿಗೆ 19 ಲಕ್ಷ, ವಸತಿ ಯೋಜನೆಗಾಗಿ 21 ಲಕ್ಷ, ಚರಂಡಿ ಅಭಿವೃದ್ಧಿಗಾಗಿ 14 ಲಕ್ಷ, ತೋಟಗಾರಿಕಾ ಅಭಿವೃದ್ಧಿ 14 ಲಕ್ಷ, ಎಸ್ಸಿ ಎಸ್ಟಿ ಅನುದಾನದ 11 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
“ಅಧಿಕಾರ ಸ್ವೀಕರಿಸಿದ ಒಂದು ವರ್ಷದ ಅವಧಿಯಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ನಡೆಸಿ ಜನರ ಗಮನ ಸೆಳೆಯಲಾಗಿತ್ತು. ಗ್ರಾಮೋತ್ಸವದಲ್ಲಿ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಹಿಜಾಮ ಚಿಕಿತ್ಸೆ, ಸ್ವಚ್ಛತಾ ಆಂದೋಲನ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಘಟಕದ ವಿರುದ್ಧ ಎಸ್.ಡಿ.ಪಿ.ಐ ಕಳೆದ 10 ವರ್ಷಗಳಿಂದ ಹೋರಾಟ ನಡೆಸಿದ್ದು, ಈ ಅವಧಿಯಲ್ಲಿ ಅದಕ್ಕೆ ಪರಿಹಾರ ಒದಗಿದೆ. ಸಜಿಪನಡು ಗ್ರಾಮದಲ್ಲಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಒಂದೇ ಪ್ರದೇಶದಲ್ಲಿ ವ್ಯವಸ್ಥೆ ಮಾಡಿ, ‘ಸಜಿಪ ವನ್ -2020’ ವ್ಯವಸ್ಥೆಯನ್ನು ತರಲಾಗಿತ್ತು. ಅಲ್ಲದೆ ಜಿಲ್ಲಾ ಪಂಚಾಯತ್, ವಿಧಾನ ಪರಿಷತ್ ಸದಸ್ಯರ ಅನುದಾನವೂ ಈ ಅವಧಿಯಲ್ಲಿ ಲಭ್ಯವಾಗಿದೆ. ರಾಜ್ಯಮಟ್ಟದಲ್ಲೇ ಹೆಸರು ಪಡೆದ ಹಿಂದೂ ರುದ್ರ ಭೂಮಿ ಯೋಜನೆ ಎಸ್.ಡಿ.ಪಿ.ಐ ಅವಧಿಯಲ್ಲಿ ಅನುಷ್ಠಾನಗೊಂಡಿದೆ” ಎಂದು ಸಜಿಪ ಗ್ರಾಮಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ನಾಸೀರ್ ಸಜಿಪ ಪತ್ರಿಕೆಗೆ ತಿಳಿಸಿದ್ದಾರೆ.
ಪಕ್ಷದ ಸಹಕಾರ:
ಎಸ್.ಡಿ.ಪಿ.ಐ ವತಿಯಿಂದಲೂ ಅನುದಾನಗಳು ದೊರೆತಿದ್ದು, ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ನಾಸೀರ್ ತಿಳಿಸಿದ್ದಾರೆ.
“ಪಕ್ಷದ ವತಿಯಿಂದ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರ, ಬಸ್ ನಿಲ್ದಾಣ, ಕೊಳವೆ ಬಾವಿಗಳನ್ನು ಗ್ರಾಮಕ್ಕೆ ಒದಗಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೆ ಪಕ್ಷವು ಪ್ರೆಸ್ ಕ್ಲಬ್ ನಲ್ಲಿ ಅಭಿವೃದ್ಧಿ ಕೈಪಿಡಿಯನ್ನು ಬಿಡುಗಡೆಗೊಳಿಸಿತ್ತು.