Home ಟಾಪ್ ಸುದ್ದಿಗಳು ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳಲು ಯತ್ನಿಸುತ್ತಿರುವ ಸರ್ಕಾರ: SDPI ಆಕ್ರೋಶ

ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳಲು ಯತ್ನಿಸುತ್ತಿರುವ ಸರ್ಕಾರ: SDPI ಆಕ್ರೋಶ

► ‘ಅಡಿಕೆ ಬೆಳೆಯ ವಿರುದ್ಧ ಗೃಹ ಸಚಿವರು ಹೇಳಿಕೆ ನೀಡಿದಾಗ ಮೌನ ಸಮ್ಮತಿ ನೀಡಿದ ಕರಾವಳಿ ಶಾಸಕರ ನಡೆ ಖಂಡನೀಯ’

ಮಂಗಳೂರು: ಸರ್ಕಾರವು ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳಲು ಯತ್ನಿಸುತ್ತಿದೆ ಎಂದು ಎಸ್.ಡಿ.ಪಿ.ಐ ದ.ಕ. ಜಿಲ್ಲಾ ಉಪಾಧ್ಯಕ್ಷ ಮತ್ತು ರೈತ ಪರ ಹೋರಾಟಗಾರ ವಿಕ್ಟರ್ ಮಾರ್ಟಿಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಗೊಳಿಸಿರುವ ಅವರು, “ಬೆಳಗಾವಿ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡುತ್ತಾ ಅಡಿಕೆ ಬೆಳೆಗೆ ಭವಿಷ್ಯ ಇಲ್ಲ, ಆ ಬೆಳೆಗೆ ಪ್ರೋತ್ಸಾಹಿಸಬಾರದು ಭವಿಷ್ಯದಲ್ಲಿ ಅಡಿಕೆ ಬೆಳೆಗಾರರು ಬೀದಿಗೆ ಬರಲಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಅಡಿಕೆ ಬೆಳೆಗಾರರ ಭವಿಷ್ಯದಲ್ಲಿ ಚೆಲ್ಲಾಟವಾಡಲು ಯೋಜನೆ ರೂಪಿಸುತ್ತಿರುವ ಸರ್ಕಾರದ ನಡೆ ಖಂಡನೀಯ ಎಂದು ಕಿಡಿಕಾರಿದ್ದಾರೆ.

ಅಡಿಕೆ ಬೆಳೆಯು ಕರಾವಳಿ ಹಾಗೂ ಮಲೆನಾಡಿನ ಕೃಷಿಕರ ಜೀವನಾಡಿ ಹಾಗೂ ಆರ್ಥಿಕತೆಯ ಮೂಲವಾಗಿದ್ದು ,ಈ ಬೆಳೆಯನ್ನು ಬೆಂಬಲಿಸಬಾರದು, ಪ್ರೋತ್ಸಾಹಿಸಬಾರದು, ಇದಕ್ಕೆ ಭವಿಷ್ಯ ಇಲ್ಲ ಎಂದು ಗೃಹ ಸಚಿವರು ಹೇಳಿಕೆ ನೀಡುವಾಗ ಮೌನ ವಹಿಸಿರುವ ಅಡಿಕೆ ಬೆಳೆಯುವ ಭಾಗದ ಬಿಜೆಪಿ ಶಾಸಕರ ನಡೆಯನ್ನು ವಿಕ್ಟರ್ ಮಾರ್ಟಿಸ್ ಖಂಡಿಸಿದ್ದಾರೆ.

ಆರಗ ಜ್ಞಾನೇಂದ್ರ ಅವರಿಗೆ ಅವರ ಗೃಹ ಖಾತೆಯನ್ನೇ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಾ ಇಲ್ಲ, ಅದರೆಡೆಯಲ್ಲಿ ಕೃಷಿ ಸಚಿವರು ನೀಡಬೇಕಾದ ವಿಚಾರದ ಬಗ್ಗೆ ಇವರು ಗೊಂದಲಕಾರಿ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಇವರು ಸಚಿವ ಸಂಪುಟದಲ್ಲಿ ಇರಲು ಅಯೋಗ್ಯರು ಎಂದು ಹೇಳಿದ್ದಾರೆ.

ಡಬಲ್ ಇಂಜಿನ್ ಸರ್ಕಾರ ಎಂದು ಬೊಬ್ಬೆ ಹಾಕುವ ಬಿಜೆಪಿ ಸರ್ಕಾರ ಈ ಹಿಂದಿನಿಂದಲೂ ಅಡಿಕೆ ಬೆಳೆಗಾರರನ್ನು ಭಯದಿಂದಲೆ ಇರುವಂತೆ ಮಾಡುತ್ತಿದೆ. ಈ ಹಿಂದೆ ಕೇಂದ್ರ ಬಿಜೆಪಿ ಸರ್ಕಾರ ಅಡಿಕೆಯಲ್ಲಿ ಕ್ಯಾನ್ಸರ್ ಪೂರಕ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್ ಗೆ ಅಫಿದವಿತ್ ಸಲ್ಲಿಸಿತ್ತು.

ಆದರೆ ದೇಶಿಯ ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬಾರದೆಂದು ಹೇಳುವ ಈ ಬಿಜೆಪಿ ಸರ್ಕಾರ ಭೂತಾನ್ ನಿಂದ ಎಂ.ಐ.ಪಿ (ಕನಿಷ್ಠ ಆಮದು ದರ) ಇಲ್ಲದೆ ಷರತ್ತು ರಹಿತವಾಗಿ ಪ್ರತೀ ವರ್ಷ 17000 ಟನ್ ಅಡಿಕೆ ಆಮದಿಗೆ ಅನುಮತಿ ನೀಡಿದೆ. ಅದಲ್ಲದೇ ಶ್ರೀಲಂಕಾ ,ಮಯನ್ಮಾರ್, ಹಾಗೂ ಭೂತಾನ್ ದೇಶಗಳಿಂದ ಯಥೇಚ್ಛವಾಗಿ ಭಾರತಕ್ಕೆ ಆಮದಾಗಿ ಇಲ್ಲಿನ ಚಾಲಿ ಅಡಿಕೆಯೊಂದಿಗೆ ಮಿಶ್ರಣ ಗೊಂಡು ಫ್ಯಾಕ್ಟರಿಗಳಿಗೆ ರವಾನೆಯಾಗುತ್ತಿರುವುದನ್ನು ತಡಯಲು ಡಬಲ್ ಇಂಜಿನ್ ಸರ್ಕಾರಕ್ಕೆ  ಸಾಧ್ಯವಾಗಿಲ್ಲ.

ಸರ್ಕಾರದ ವೈಫಲ್ಯವನ್ನು ಸರಿಪಡಿಸದೆ ಕೋಟ್ಯಂತರ ಕೃಷಿಕರ ಜೀವಾನಾಧಾರದ ಮೂಲವಾಗಿರುವ ಅಡಿಕೆಯನ್ನು ಹಿಂಬಾಗಿಲ ಮೂಲಕ ಇಲ್ಲವಾಗಿಸಲು ಯತ್ನಿಸುತ್ತಿರುವ ಸರ್ಕಾರದ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಅಡಿಕೆ ಕೃಷಿಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದಕ್ಕಿರುವ ಪರಿಹಾರವನ್ನು ಹುಡುಕಬೇಕೇ ಹೊರತು ಆ ಕೃಷಿಗೆ ಪ್ರೋತ್ಸಾಹ ನೀಡಬಾರದೆಂದು ಅಧಿವೇಶನದಲ್ಲಿ ಹೇಳಿಕೆ ನೀಡುವುದು ಬಾಲಿಷತನದ ಅಥವಾ ಆಡಳಿತ ವೈಫಲ್ಯದ ಪರಮಾವಧಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಒಂದು ವೇಳೆ ಸರ್ಕಾರ ಅಡಿಕೆ ಬೆಳೆಯ ಬಗ್ಗೆ ಮೃದು ಧೋರಣೆ ತೋರಿದರೆ ಎಸ್‌.ಡಿ.ಪಿ.ಐ ಪಕ್ಷವೂ ಸಾವಿರಾರು ರೈತರನ್ನು ಸೇರಿಸಿಕೊಂಡು ಬೀದಿ ಹೋರಾಟ ನಡೆಸಲಿದೆ ಹಾಗೂ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಎಸ್‌.ಡಿ.ಪಿ.ಐ ಪಕ್ಷ ಮಾಡಲಿದೆ ಎಂದು ವಿಕ್ಟರ್ ಮಾರ್ಟಿಸ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version