ಮಂಗಳೂರು: ಬಜರಂಗದಳದ ಕಾರ್ಯಕರ್ತನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕನ್ಯಾಡಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಂಗಳವಾರ “ದಿನೇಶ್ ಕನ್ಯಾಡಿಗೆ ನ್ಯಾಯ ಕೊಡಿ” ಎಂಬ ಘೋಷಣೆಯೊಂದಿಗೆ ಬೆಳ್ತಂಗಡಿಯಿಂದ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಜಾಥಾ ನಡೆಯಿತು.
ಬೆಳಗ್ಗೆ ಬೆಳ್ತಂಗಡಿಯಲ್ಲಿ ಜಾಥಾಕ್ಕೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಚಾಲನೆ ನೀಡಿದರು.
ಜಾಥಾ ಬೆಳ್ತಂಗಡಿ, ಪೂಂಜಾಲಕಟ್ಟೆ, ಬಂಟ್ವಾಳ, ಬಿ.ಸಿ.ರೋಡ್, ಫರಂಗಿಪೇಟೆ ಮೂಲಕ ಹಾದು ಮಂಗಳೂರಿಗೆ ಆಗಮಿಸಿತು.
ಮಂಗಳೂರಿನ ಕ್ಲಾಕ್ ಟವರ್ ಬಳಿ ಜಾಥಾ ಸಮಾರೋಪಗೊಂಡಿದ್ದು, ಇಲ್ಲಿ ಸೇರಿದ್ದ ಪ್ರತಿಭಟನಕಾರರನ್ನು ಉದ್ದೇಶಿಸಿ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಮೂಡಿದೆ. ರೌಡಿ ಶೀಟರ್ ಹರ್ಷ ಎಂಬಾತ ಹತ್ಯೆಯಾದಾಗ ಇಡೀ ಸರ್ಕಾರ ಆತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಮಾತ್ರವಲ್ಲ 25 ಲಕ್ಷ ರೂ. ಪರಿಹಾರವನ್ನೂ ಸರ್ಕಾರ ನೀಡಿದೆ. ಆದರೆ ದಲಿತ ದಿನೇಶ್ ನನ್ನು ಬಜರಂಗದಳದ ಕಾರ್ಯಕರ್ತ ಕೃಷ್ಣ ಎಂಬಾತ ಹತ್ಯೆ ಮಾಡಿದಾಗ ಯಾವೊಬ್ಬ ರಾಜಕಾರಣಿಯೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿಲ್ಲ. ಸಮರ್ಪಕ ಪರಿಹಾರವನ್ನೂ ನೀಡಿಲ್ಲ. ಇದೆಂತಹ ತಾರತಮ್ಯ, ರಾಜ್ಯದ ಇತಿಹಾಸದಲ್ಲಿ ಇಂತಹ ನೀಚ ರಾಜಕಾರಣವನ್ನು ನೋಡಿಲ್ಲ ಎಂದು ಹೇಳಿದರು.
ದ್ವೇಷ ಭಾಷಣ ಮಾಡಿದ ಸಂಘಪರಿವಾರದ 350ಕ್ಕೂ ಹೆಚ್ಚು ಮುಖಂಡರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿದೆ. ಈ ಮೂಲಕ ಸರ್ಕಾರ ಇಂತಹವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸಂಘಪರಿವಾರದ ಯಾವೊಬ್ಬ ಕಾರ್ಯಕರ್ತ ಕೂಡ ಹೋರಾಡಿಲ್ಲ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮರು ಒಟ್ಟಾಗಿ ನಿಂತು ಹೋರಾಟ ಮಾಡಿದ್ದಾರೆ. ಆದರೆ ಇಂದು ದೇಶ ಸಂಘಪರಿವಾರದಿಂದ ಅಪಾಯದಲ್ಲಿದೆ. ಇದನ್ನು ರಕ್ಷಿಸಲು ನಾವೆಲ್ಲಾ ಒಂದಾಗಬೇಕು. ದೇಶದ ಜಾತ್ಯತೀತ ಸಿದ್ಧಾಂತ, ಪ್ರಜಾಪ್ರಭುತ್ವವನ್ನು ಯಾವ ಬೆಲೆ ತೆತ್ತಾದರೂ ರಕ್ಷಿಸಲು ನಾವು ಪಣತೊಡಬೇಕು ಎಂದು ಹೇಳಿದರು.
ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ನಿಜವಾಗಿಯೂ ಹಿಂದೂಗಳು ಸಂಘಪರಿವಾರದಿಂದ ಅಪಾಯದಲ್ಲಿದ್ದಾರೆ. ಸಂಘಪರಿವಾರದವರು ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದಾರೆ. ದಲಿತರು ಹತ್ಯೆಯಾದಾಗ ಸರ್ಕಾರದಲ್ಲಿರುವ ದಲಿತರ ಸಚಿವರು ಕೂಡ ಕಣ್ಣೆತ್ತಿ ನೋಡಿಲ್ಲ. ಸಚಿವ ನಾರಾಯಣಸ್ವಾಮಿಯಾಗಲೀ, ಗೋವಿಂದ ಕಾರಜೋಳ ಅವರಾಗಲೀ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಅವರೆಲ್ಲರೂ ಪಕ್ಷದ ಗುಲಾಮರು ಎಂದು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಯವರ ಪರವಾಗಿ ಉಪ ವಿಭಾಗಾಧಿಕಾರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ದಿನೇಶ್ ಕನ್ಯಾಡಿ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡಬೇಕು, 2 ಎಕರೆ ಉಚಿತ ಜಮೀನನ್ನು ನೀಡಬೇಕು, ಸಂತ್ರಸ್ತ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಹತ್ಯೆ ಆರೋಪಿಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್,ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಅನ್ವರ್ ಸಾದಾತ್ ಬಜತ್ತೂರು ಮಾತನಾಡಿದರು.
ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಪುತ್ತೂರು,ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಮಾಚಾರ್, ಶಾಫಿ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕ್ರಷ್ಣಾಪುರ, ರಿಯಾಝ್ ಕಡಂಬು, ಜಿಲ್ಲಾ ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿ, ಸುಹೈಲ್ ಪಳ್ನಿರ್, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಾಗರ್, ಇಕ್ಬಾಲ್ ಬೆಳ್ಳಾರೆ , ಇರ್ಷಾದ್ ಅಜ್ಜಿನಡ್ಕ, ಶಾಹುಲ್ ಎಸ್. ಎಚ್, ನಿಸಾರ್ ಕುದ್ರಡ್ಕ, ಯಾಸೀನ್ ಅರ್ಕುಳ, ಆಸಿಫ್ ಕೋಟೆಬಾಗಿಲು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.