Home ಟಾಪ್ ಸುದ್ದಿಗಳು ಬಿಜೆಪಿ ಸದಸ್ಯನ ಖಾತೆಗೆ ನಗರಸಭೆ ನಿಧಿಯಿಂದ ಹಣ ವರ್ಗಾವಣೆ: ಎಸ್ ಡಿಪಿಐ ಸದಸ್ಯರಿಂದ ತರಾಟೆ, ಮಾತಿನ...

ಬಿಜೆಪಿ ಸದಸ್ಯನ ಖಾತೆಗೆ ನಗರಸಭೆ ನಿಧಿಯಿಂದ ಹಣ ವರ್ಗಾವಣೆ: ಎಸ್ ಡಿಪಿಐ ಸದಸ್ಯರಿಂದ ತರಾಟೆ, ಮಾತಿನ ಚಕಮಕಿ

ಮಡಿಕೇರಿ: ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರೊಬ್ಬರು ನಿಯಮ ಉಲ್ಲಂಘಿಸಿ ನಗರಸಭೆ ನಿಧಿಯಿಂದ ತನ್ನ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವ ವಿಷಯ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಎಸ್ ಡಿಪಿಐ ಸದಸ್ಯರು ದಾಖಲೆ ಸಮೇತ ಆರೋಪ ಮಾಡಿದಾಗ, ಬಿಜೆಪಿ ಸದಸ್ಯರು ಮತ್ತು ನಗರ ಸಭೆ ಅಧಿಕಾರಿಗಳು ತಬ್ಬಿಬ್ಬಾದರು. ಈ ವೇಳೆ ಉತ್ತರಿಸಲಾಗದೆ ಬಿಜೆಪಿ ಸದಸ್ಯರು ವಿಷಯಾಂತರ ಮಾಡಿ ಗೊಂದಲ ನಿರ್ಮಿಸಲು ಪ್ರಯತ್ನಿಸಿದ ಪ್ರಸಂಗವೂ ಸಭೆಯಲ್ಲಿ ನಡೆಯಿತು.

ಸಭೆ ಆರಂಭಗೊಳ್ಳುತ್ತಿದ್ದಂತೆ ಎಸ್ ಡಿಪಿಐ ಸದಸ್ಯ ಅಮೀನ್ ಮೊಹ್ಸಿನ್ ಎದ್ದು ನಿಂತು, ನಗರಸಭೆ 19ನೇ ವಾರ್ಡ್ ನ ಬಿಜೆಪಿ ಸದಸ್ಯರು ಪ್ಲಾಂಟರ್ಸ್ ವರ್ಲ್ಡ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ನಗರಸಭೆಯ ಕಾಡು ಕಡಿಯುವ ಯಂತ್ರದ ದುರಸ್ತಿ ಕೆಲಸವನ್ನು ಈ ಸಂಸ್ಥೆಯ ಮೂಲಕ ಮಾಡಿಸಲಾಗಿದೆ. ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಸೆಕ್ಷನ್ 16(1)(ಕೆ )ಪ್ರಕಾರ, ಯಾವುದೇ ನಗರಸಭೆ ಸದಸ್ಯ ನಗರಸಭೆಗೆ ಸಂಬಂಧಿಸಿದ ಕಾಮಗಾರಿ ನಡೆಸುವಂತಿಲ್ಲ. ನಗರಸಭೆಯಿಂದ ಯಾವುದೇ ಕಾಮಗಾರಿಗಾಗಿ ಸದಸ್ಯರು ನೇರ ಅಥವಾ ಪರೋಕ್ಷವಾಗಿ ಹಣ ಪಡೆಯುವಂತಿಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಅವರ ಸದಸ್ಯತ್ವ ರದ್ದಾಗುತ್ತದೆ. ಆದರೆ ಬಿಜೆಪಿ ಸದಸ್ಯರೊಬ್ಬರ ಬ್ಯಾಂಕ್ ಖಾತೆಗೆ ನಗರಸಭೆಯಿಂದ ಹಣ ಜಮೆಯಾಗಿದೆ. ಜಿಎಸ್ ಟಿ ಹಾಗೂ ಪಾನ್ ಕಾರ್ಡ್ ಕೂಡ ಅವರ ಹೆಸರಿನಲ್ಲಿಯೇ ಇದೆ ಎಂದು ಆರೋಪಿಸಿದರು.

ಈ ವೇಳೆ ಬಿಜೆಪಿ ಮತ್ತು ಎಸ್ ಡಿಪಿಐ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎಸ್ ಡಿಪಿಐ ಸದಸ್ಯರು ತಾವು ಮಾಡಿದ ಆರೋಪದ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಿದರು. ಈ ವೇಳೆ ಉತ್ತರಿಸಲಾಗದ ಬಿಜೆಪಿ ಸದಸ್ಯರು, ಗಣಪತಿ ಬೀದಿಯಲ್ಲಿ ಹೆಚ್ಚುವರಿ ಬೀದಿದೀಪಗಳನ್ನು ಯಾಕೆ ಅಳವಡಿಸಲಾಗಿದೆ ಎಂಬ ಸಂಬಂಧವೇ ಇಲ್ಲದ ವಿಷಯ ಪ್ರಸ್ತಾಪಿಸಿ ಗಮನ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರು.

  ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರಾದ ಸತೀಶ್ ಮಾತನಾಡಿ, ಗಣಪತಿ ಬೀದಿಯಲ್ಲಿ ಹೆಚ್ಚುವರಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ತಿರುಗೇಟು ನೀಡಿದ ಎಸ್ ಡಿಪಿಐ ಸದಸ್ಯ ಅಮೀನ್ ಮೊಹ್ಸಿನ್, ಬೀದಿ ದೀಪ ಹಾಕಿರುವುದು ಸಾರ್ವಜನಿಕರ ಅನುಕೂಲಕ್ಕೆ. ಜನರ ಅನುಕೂಲಕ್ಕೆ ಹಾಕಿರುವ ಬೀದಿ ದೀಪಗಳನ್ನು ತೆರವುಗೊಳಿಸಬೇಕು ಎನ್ನುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದೀರಿ, ನಿಮಗೆ ಯೋಗ್ಯತೆ ಇದ್ದರೆ ನಿಮ್ಮ ವಾರ್ಡ್ ಗಳಲ್ಲಿ ಅಗತ್ಯವಿರುವಷ್ಟು ಬೀದಿ ದೀಪಗಳನ್ನು ಅಳವಡಿಸಿಕೊಳ್ಳಿ, ಅದನ್ನು ಬಿಟ್ಟು ಹಾಕಿದ್ದ ಬೀದಿ ದೀಪಗಳನ್ನು ತೆರವುಗೊಳಿಸಬೇಕು ಎಂಬುದು ಯಾವ ರೀತಿಯ ರಾಜಕೀಯ, ಇದು ಸಭೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಹರಿಹಾಯ್ದರು.

ಆಗ ಅಧ್ಯಕ್ಷತೆವಹಿಸಿದ್ದ ಅನಿತಾ ಪೂವಯ್ಯ ಅವರು, ನನ್ನ ಯೋಗ್ಯತೆ ಬಗ್ಗೆ ಪ್ರಶ್ನಿಸಿದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ, ಅಮೀನ್ ಮೊಹ್ಸಿನ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸದಸ್ಯ ಸತೀಶ್ ಕೂಡ ಅದೇ ಬೇಡಿಕೆ ಇಟ್ಟರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಗಣಪತಿ ಬೀದಿಯಲ್ಲಿ ಹಲವು ಕಾಮಗಾರಿಗಳಲ್ಲಿ ಹಗರಣ ನಡೆದಿದೆ ಎಂದು ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಹೇಳಿದರು. ಹಗರಣ ನಡೆದಿದ್ದರೆ ಲೋಕಾಯುಕ್ತಕ್ಕೆ ವಹಿಸಿ ಎಂದು ಅಮೀನ್ ಮೊಹ್ಸಿನ್ ಸವಾಲು ಹಾಕಿದರು.

ಈ ವೇಳೆ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಅಧ್ಯಕ್ಷರ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ. ಅಜೆಂಡಾ ಪ್ರಕಾರ ಸಭೆ ನಡೆಯುತ್ತಿಲ್ಲ,ನಗರದಲ್ಲಿ ಬೀದಿ ದೀಪ ಉರಿಯುತ್ತಿಲ್ಲ,ಹೈಮಾಸ್ಕ್ ಸಮಸ್ಯೆಯಿದೆ,ಚರಂಡುಯಲ್ಲಿ ನೀರು ಹರಿಯುತ್ತಿಲ್ಲ,ವಿಪರೀತ ಮಳೆಯಿದೆ ಈ ಕೆಲಸಗಳು ನಡೆಯತ್ತಿಲ್ಲ ಎಂದು ಹೇಳಿ ಬಿಜೆಪಿ ಸದಸ್ಯ ಅರುಣ್ ಶೆಟ್ಟಿ ತಮ್ಮದೇ ಆಡಳಿತದ ಕೋಪವನ್ನು ಎತ್ತಿ ತೋರಿಸಿ ಸಭೆಯಿಂದ ಹೊರನಡೆದರು.

ನನ್ನ ಯೋಗ್ಯತೆ ಬಗ್ಗೆ ಮಾತನಾಡಿರುವ ಅಮೀನ್ ಮೊಹ್ಸಿನ್ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಸಭೆಯನ್ನು ಮುಂದುವರಿಸುವುದಿಲ್ಲ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು.

ಬೀದಿ ದೀಪವನ್ನು ತೆರವು ಮಾಡಿಸಬೇಕು ಎಂದು ಹೇಳಿದ ನೀವು ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದು ಅಮೀನ್ ಮೊಹ್ಸಿನ್ ಆಗ್ರಹಿಸಿದರು.

ಕೊನೆಗೆ ಒಂದೋ ಕ್ಷಮೆಯಾಚಿಸಬೇಕು, ಇಲ್ಲವೇ ನಿಯಮದಂತೆ ಸಭೆಯಿಂದ ಹೊರ ನಡೆಯಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ಕ್ಷಮೆ ಕೇಳಲು ಒಪ್ಪದ ಅಮೀನ್ ಮೊಹ್ಸಿನ್, ತಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಕ್ಷಮೆ ಕೇಳುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿ, ಎಸ್ ಡಿಪಿಐನ ಇತರ ಸದಸ್ಯರೊಂದಿಗೆ ಸಭೆ ಬಹಿಷ್ಕರಿಸಿ ಹೊರನಡೆದರು.

Join Whatsapp
Exit mobile version