Home ಟಾಪ್ ಸುದ್ದಿಗಳು SDPI ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆ; ಹಲವು ಅಭಿಯಾನಗಳಿಗೆ ಅಧಿಕೃತ ಅಂಗೀಕಾರ

SDPI ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆ; ಹಲವು ಅಭಿಯಾನಗಳಿಗೆ ಅಧಿಕೃತ ಅಂಗೀಕಾರ

ಬೆಂಗಳೂರು: SDPI ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆ ದಿನಾಂಕ 08 ನವೆಂಬರ್ 2022 ರಂದು ಬೆಂಗಳೂರಿನ ಮುಖ್ಯ ಕಛೇರಿಯಲ್ಲಿ  ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ಅಧ್ಯಕ್ಷತೆಯಲ್ಲಿ, ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ವರ್ಗದವರಿಗೆ 10% ಮೀಸಲಾತಿ ತೀರ್ಪು, ನೋಟು ಅಮಾನೀಕರಣ ನಡೆದು ಆರು ವರ್ಷ, ಮತ್ತು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷದ ನಾಯಕರನ್ನು ಬಂಧಿಸಿರುವುದರ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ ಮತ್ತು ಇ-ಮೇಲ್ ಅಭಿಯಾನ ವಿಚಾರಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಲಾಯಿತು.

1. ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ವರ್ಗದವರಿಗೆ 10% ಮೀಸಲಾತಿ ತೀರ್ಪು

ಸಾಮಾಜಿಕವಾಗಿ ತುಳಿಯಲ್ಪಟ್ಟವರನ್ನು ಮೇಲೆತ್ತುವ ಮೂಲಕ ಸಾಮಾಜಿಕ ಸಮಾನತೆ ಸಾಧಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿಯ ಪದ್ಧತಿಯನ್ನು ಜಾರಿಗೆ ತರಲಾಯಿತು. ಆದರೆ ಸಂವಿಧಾನದ ಈ ಮೂಲ ಆಶಯವನ್ನೇ ಬದಿಗೊತ್ತಿ, ಆರ್ಥಿಕತೆಯ ಆಧಾರದ ಮೇಲೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ 10% ಮೀಸಲಾತಿಯನ್ನು ಮನುವಾದಿ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಇದನ್ನು ಈಗ ಸುಪ್ರೀಂ ಕೋರ್ಟ್ ಕೂಡ ಅಸ್ತು ಎಂದಿರುವುದು ದುರದೃಷ್ಟಕರ. ಈ ಬಗ್ಗೆ ಸುಪ್ರೀಂಕೋರ್ಟ್ ತಮ್ಮ ತೀರ್ಪನ್ನು ಮರುಪಲಿಶೀಲನೆ ಮಾಡಬೇಕೆಂದು ಮನವಿ ಮಾಡಲು ನಿರ್ಣಯವನ್ನು ಕೈಗೊಳ್ಳಲಾಯಿತು.

2. ನೋಟು ಅಮಾನೀಕರಣ ನಡೆದು ಆರು ವರ್ಷ

ಕಪ್ಪು ಹಣವನ್ನು ಸಂಪೂರ್ಣ ನಾಶ ಮಾಡುತ್ತೇವೆ, ನಕಲಿ ನೋಟಿನ ಹಾವಳಿ ತಪ್ಪಿಸುತ್ತೇವೆ, ಉಗ್ರವಾದಿಗಳ ಬೆನ್ನು ಮುರಿಯುತ್ತೇವೆ, ನಗದುರಹಿತ ಆರ್ಥಿಕತೆ ತರುತ್ತೇವೆ ಹೀಗೆ ಹಲವು ಭರವಸೆಗಳನ್ನು ನೀಡಿ ಪ್ರಧಾನ ಮಂತ್ರಿ ಮೋದಿಯವರು ಆರು ವರ್ಷಗಳ ಹಿಂದೆ ಇದೇ ದಿನ ದೇಶದಲ್ಲಿ ಚಲಾವಣೆಯಲ್ಲಿದ್ದ 500 ರೂಪಾಯಿ ಮತ್ತು 1000 ರೂಪಾಯಿಗಳ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಇದಾದ ನಂತರ ನನಗೆ 50 ದಿನ ಅವಕಾಶ ಕೊಡಿ, ನಾನು ಈ ಪ್ರಯತ್ನದಲ್ಲಿ ಸೋತರೆ ನನ್ನನ್ನು ಕೊಂದು ಬಿಡಿ ಎನ್ನುವಂತಹ ಮಾತುಗಳನ್ನು ಜನರ ಮುಂದಿಟ್ಟಿದ್ದರು. ಈಗ ಆ ಒಂದು ಅವೈಜ್ಞಾನಿಕ ನಿರ್ಣಯಕ್ಕೆ ಆರು ವರ್ಷ ತುಂಬಿದೆ. ಆದರೆ ಇವರು ಹೇಳಿದ ಯಾವುದೂ ಕೂಡ ಸಾಧ್ಯವಾಗಿಲ್ಲ. ಕಪ್ಪು ಹಣ ಇನ್ನಷ್ಟು ಹೆಚ್ಚಾಗಿದೆ. ನಕಲಿ ನೋಟುಗಳು ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮಟ್ಟದಲ್ಲಿ ಚಲಾವಣೆಯಲ್ಲಿವೆ. ಉಗ್ರವಾದದ ವಿಚಾರಕ್ಕೆ ಬಂದಾಗ ಕಾಶ್ಮೀರದಲ್ಲಿ ದಿನಬೆಳಗಾದರೆ ಜನರ ಹತ್ಯೆ ನಡೆಯುತ್ತಿದೆ ಮತ್ತು ಇವರು ಹೇಳಿದ ನಗದು ರಹಿತ ಆರ್ಥಿಕತೆ ಸಂಪೂರ್ಣವಾಗಿ ಸೋತಿದೆ. ಏಕೆಂದರೆ ನೋಟ್ ಬ್ಯಾನ್ ಮೊದಲು ಚಲಾವಣೆಯಲ್ಲಿದ್ದಂತಹ ನೋಟುಗಳ ಸಂಖ್ಯೆಗಿಂತ ಈಗ ಹೆಚ್ಚಿನ ಮಟ್ಟದಲ್ಲಿ ನೋಟುಗಳು ಚಲಾವಣೆಯಲ್ಲಿವೆ. ಈ ಬಗ್ಗೆ ಪ್ರಧಾನಿಗಳು ಮಾತನಾಡುವುದನ್ನೆ ಮರೆತಿದ್ದಾರೆ. ದೇಶದ ಜನರಿಗೆ ಪ್ರಧಾನಿಗಳು ಈ ನೋಟ್ ಬಂಧಿಯಿಂದ ದೇಶಕ್ಕೆ ಆದ ಅನುಕೂಲ ಏನು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

3. ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷದ ನಾಯಕರನ್ನು ಬಂಧಿಸಿರುವುದರ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ ಮತ್ತು ಇ-ಮೇಲ್ ಅಭಿಯಾನ.

ಫ್ಯಾಶಿಸ್ಟ್ ಬಿಜೆಪಿ ಸರ್ಕಾರ ದೇಶದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ತನ್ನ ವಿರೋಧಿಗಳನ್ನು ಮಟ್ಟ ಹಾಕಲು, ಹೆದರಿಸಲು ಬಳಸುತ್ತಿದೆ. ಇದರ ಭಾಗವಾಗಿ ಎಸ್‍ಡಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆಯವರನ್ನು NIA ಮೂಲಕ ಬಂಧಿಸಿದೆ. ಇದರ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಚಳುವಳಿ ಮತ್ತು ಇ-ಮೇಲ್ ಕಳಿಸುವ ಅಭಿಯಾನವನ್ನು ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರಾಷ್ಟೀಯ ನಾಯಕರಾದ ಡಾ. ಆವಾದ್ ಶರೀಫ್,  ಅಬ್ದುಲ್ ಹನ್ನಾನ್, ರಾಜ್ಯ ನಾಯಕರಾದ  ದೇವನೂರ ಪುಟ್ಟನಂಜಯ್ಯ, ಪ್ರೊ. ಸಯಿದಾ ಸಾದಿಯ, BR ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ಆನಂದ ಮಿತ್ತಬೈಲ್, ಖಾಲಿದ್ ಯಾದಗಿರಿ ಮತ್ತು ಎಲ್ಲಾ ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Join Whatsapp
Exit mobile version