Home ಟಾಪ್ ಸುದ್ದಿಗಳು ಎಸ್ ಡಿಪಿಐ ಹೋರಾಟದ ಫ್ರಲಶೃತಿ: ಮಡಿಕೇರಿಯ ಗಣಪತಿ ಬೀದಿ ರಸ್ತೆ ಅಗಲೀಕರಣ ವಿವಾದ ಸುಖಾಂತ್ಯ

ಎಸ್ ಡಿಪಿಐ ಹೋರಾಟದ ಫ್ರಲಶೃತಿ: ಮಡಿಕೇರಿಯ ಗಣಪತಿ ಬೀದಿ ರಸ್ತೆ ಅಗಲೀಕರಣ ವಿವಾದ ಸುಖಾಂತ್ಯ

ಮಡಿಕೇರಿ: ಇಲ್ಲಿನ ಗಣಪತಿ ಬೀದಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಉಂಟಾಗಿದ್ದ ಅಡೆತಡೆಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಡೆಸಿದ ಹೋರಾಟಕ್ಕೆ ಕೊನೆಗೂ ಜಯಲಭಿಸಿದ್ದು, ರಸ್ತೆ ಅಗಲೀಕರಣ ವಿವಾದ ಸುಖಾಂತ್ಯ ಕಂಡಿದೆ.
ಮಡಿಕೇರಿ ನಗರಸಭೆಯು 12 ವರ್ಷಗಳ ಹಿಂದೆ ಗಣಪತಿ ರಸ್ತೆ ಅಗಲೀಕರಣಕ್ಕೆ ಮುಂದಾಗಿತ್ತು. ಈ ಕಾಮಗಾರಿ ಕುಂಟುತ್ತಾ ಸಾಗಿದ್ದು, ಹಲವು ಅಡೆತಡೆಗಳ ಬಳಿಕ ಇತ್ತೀಚೆಗೆ ವೇಗ ಪಡೆದುಕೊಂಡಿತ್ತು. ರಸ್ತೆ ಅಗಲೀಕರಣದಿಂದಾಗಿ ಹಲವರ ಮನೆ, ಅಂಗಡಿಗಳನ್ನು ಕೂಡ ತೆರವು ಮಾಡಲಾಗಿದೆ. ಇಂಜಿನಿಯರ್ ಗಳ ಯೋಜನೆ ಪ್ರಕಾರ, ಬಿಜೆಪಿ ನಗರಸಭಾ ಮಾಜಿ ಸದಸ್ಯ ಬಿ.ಎಂ.ರಾಜೇಶ್ ಎಂಬವರ ಮನೆಯ ಹೆಚ್ಚುವರಿ ಭಾಗ ಕೂಡ ರಸ್ತೆ ಅಗಲೀಕರಣದ ವೇಳೆ ತೆರವು ಮಾಡಬೇಕಾಗಿತ್ತು. ಆದರೆ ರಾಜೇಶ್ ಅವರು ಇದಕ್ಕೆ ಅಡ್ಡಿಪಡಿಸುತ್ತಲೇ ಬರುತ್ತಿದ್ದರು.
ಇದರ ಬಗ್ಗೆ ಎಸ್ ಡಿಪಿಐ ನಗರ ಸಭಾ ಸದಸ್ಯ ಅಮೀನ್ ಮೊಹ್ಸಿನ್ ನೇತೃತ್ವದಲ್ಲಿ ಪಕ್ಷದ ಸದಸ್ಯರು ಹಲವು ರೀತಿಯ ಹೋರಾಟ ನಡೆಸಿದ್ದರು. ಆರಂಭದಲ್ಲಿ ನಗರಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ರಸ್ತೆ ಅಗಲೀಕರಣಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಆದರೆ ಬಿಜೆಪಿಯ ಮಾಜಿ ಸದಸ್ಯರೊಬ್ಬರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ತಕ್ಷಣ ನಗರ ಸಭೆ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.


ಬಳಿಕ ಎಸ್ ಡಿಪಿಐ ನಿಯೋಗ ನಗರಸಭೆ ಆಯುಕ್ತರನ್ನು ಭೇಟಿಯಾಗಿ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿತ್ತು. ಇದರಿಂದಲೂ ಯಾವುದೇ ಪ್ರಯೋಜನವಾಗದಿದ್ದಾಗ ನೇರವಾಗಿ ನಿಯೋಗ, ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಕೆಲವರ ಹಿತಾಸಕ್ತಿಯಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ತೊಡಕುಂಟಾಗುತ್ತಿರುವುದನ್ನು ಡಿಸಿಯವರ ಗಮನಕ್ಕೆ ತಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಗೆ ಆಗಮಿಸಿದಾಗ ಎಸ್ ಡಿಪಿಐ ನಗರ ಸಭೆ ಸದಸ್ಯರು ಜಿಲ್ಲಾಧಿಕಾರಿಗೆ ಸಂಪೂರ್ಣವಾಗಿ ಮಾಹಿತಿ ನೀಡಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.
ಜಿಲ್ಲಾಧಿಕಾರಿಯವರು ಕೂಡ ಇಂಜಿನಿಯರ್ ಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ರಾಜೇಶ್ ಅವರ ಮನೆಯ ಅಡಿಪಾಯವನ್ನು ತೆರವು ಮಾಡಲು ನಗರಸಭೆಯಿಂದ ಸುರತ್ಕಲ್ ಎನ್ಐಟಿಗೆ ಪತ್ರ ಬರೆಯಲಾಗಿತ್ತು.
ಈ ಮಧ್ಯೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಬಿಜೆಪಿ ಮುಖಂಡ ಬಿ.ಎಂ. ರಾಜೇಶ್ ಅವರು ತಮ್ಮ ಹಠಮಾರಿ ಧೋರಣೆಯನ್ನು ಕೈಬಿಟ್ಟು ಮನೆಯ ಹೆಚ್ಚುವರಿ ಭಾಗವನ್ನು ಸ್ವಯಂ ತೆರವುಗೊಳಿಸಿದ್ದಾರೆ. ಇದರೊಂದಿಗೆ ಹಲವು ಸಮಯದಿಂದ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾದಂತಾಗಿದೆ.

Join Whatsapp
Exit mobile version