ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ದ.ಕ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಸ್‌ಡಿಪಿಐ ನಿರ್ಧಾರ

Prasthutha|

ಮಂಗಳೂರು : ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಸ್ಡಿಪಿಐ ನಿರ್ಧರಿಸಿದೆ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಮಾಸಿಕ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸುವ ಬಗ್ಗೆ ವಿಶೇಷ ಕಾರ್ಯಯೋಜನೆಯನ್ನು ಹಾಕಲಾಯಿತು. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಬೂತ್‌ಗಳಲ್ಲಿ ಪಕ್ಷವನ್ನು ತಲುಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ವಿಶೇಷ ಚರ್ಚೆಗಳು ನಡೆದವು. ಇಂದಿನ ರಾಜಕೀಯ ಸನ್ನಿವೇಶದಲ್ಲಿ ದೇಶದಲ್ಲಿ ಎಸ್‌ಡಿಪಿಐ ಪಕ್ಷದ ಅನಿವಾರ್ಯತೆಯನ್ನು ಎಲ್ಲಾ ವರ್ಗದ ನಾಗರಿಕತೆಗೆ ತಲುಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸದಸ್ಯರನ್ನು ಸೇರ್ಪಡೆಗೊಳಿಸುವ ನಿರ್ಧಾರವನ್ನು ಸಭೆಯು ಕೈಗೊಂಡಿತು.

- Advertisement -

ಅದೇ ರೀತಿ ಇತ್ತೀಚೆಗೆ ನಡೆದಂತಹ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷವು ನಿರೀಕ್ಷೆಗೂ ಮೀರಿದ ಜಯ ಸಾಧಿಸಿದೆ. ಜಿಲ್ಲೆಯ ಮತದಾರ ಎಸ್‌ಡಿಪಿಐ ಪಕ್ಷದ ಮೇಲೆ ವಿಶ್ವಾಸ ಹಾಗೂ ನಿರೀಕ್ಷೆ ಇಟ್ಟುಕೊಂಡಿರುವುದು ಇದರಿಂದ ಸಾಬೀತಾಗಿದೆ. ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಈ ಅಭ್ಯರ್ಥಿಗಳ ವಿಜಯಕ್ಕಾಗಿ ಎಲ್ಲಾ ನಾಯಕರು, ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಪಕ್ಷವನ್ನು ಚುನಾವಣಾ ರಾಜಕೀಯ ಹಾಗೂ ಹೋರಾಟ ರಾಜಕೀಯದಲ್ಲಿ ಮುಂಚೂಣಿಗೆ ತಂದು ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕೆಂದು ಸಭೆಯು ತೀರ್ಮಾನ ಕೈಗೊಂಡಿದೆ.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ IMR, ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ S.H, ಕಾರ್ಯದರ್ಶಿಗಳಾದ ಅನ್ವರ್ ಸಾದತ್ ಬಜತ್ತೂರು, ಅಶ್ರಫ್ ಮಂಚಿ, ಜಮಾಲ್ ಜೋಕಟ್ಟೆ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -