ಮಂಗಳೂರಿನಲ್ಲಿ ಇತ್ತೀಚಿಗೆ ಡಾಕ್ಟರ್ ಪ್ರಿಯಾ ಬಲ್ಲಾಳ್ ಸೇರಿದಂತೆ ಕೆಲವು ವೈದ್ಯರು ಹಾಗೂ ಹಲವು ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆಯಿಂದ ತುಂಬು ಗರ್ಭಿಣಿ ಖತೀಜಾ ಜಾಸ್ಮಿನ್ ಎಂಬ ಮಹಿಳೆಯನ್ನು ಹೆರಿಗೆಗಾಗಿ ದಾಖಲಿಸಿಕೊಳ್ಳದೇ ಮಂಗಳೂರಿನ ಏಳೆಂಟು ಆಸ್ಪತ್ರೆಗಳಿಗೆ ಸುತ್ತಾಡುವಂತೆ ಮಾಡಿದ ಪೈಶಾಚಿಕ ಕೃತ್ಯದ ವಿರುದ್ಧ ಜಿಲ್ಲೆಯಲ್ಲಿ ಎದ್ದ ಆಕ್ರೋಶವನ್ನು ತಣಿಸುವ ಸಲುವಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖಾ ತನಿಖೆಗೆ ಆದೇಶಿಸಿದ್ದು, ಹೋರಾಟ ಕೈಗೊಂಡ ಜಿಲ್ಲೆಯ ಜನತೆಯ ಕಣ್ಣಿಗೆ ಮಣ್ಣೆರೆಚುವ ತಂತ್ರದ ಭಾಗವಾಗಿದೆ ಎಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸಂತ್ರಸ್ತೆ ಮಹಿಳೆ ಈಗಾಗಲೇ ಪೊಲೀಸ್ ದೂರು ನೀಡಿದ್ದು, ಇನ್ನೂ ದೂರಿನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳದ ಪೊಲೀಸ್ ಇಲಾಖೆ ಸಂತ್ರಸ್ತ ಮಹಿಳೆಯ ತಂದೆ ಸೇರಿದಂತೆ ಕುಟುಂಬದ ಸದಸ್ಯರ ಮೇಲೆ ದೂರು ದಾಖಲಿಸಿ ಬಂಧಿಸಿರುವುದು ಗಮನಿಸುವಾಗ ಮಂಗಳೂರಿನ ಮೆಡಿಕಲ್ ಮಾಫಿಯಾ ಎಷ್ಟೊಂದು ಪ್ರಭಾವಶಾಲಿಯಾಗಿದೆ ಎಂದು ಮನವರಿಕೆ ಆಗುತ್ತದೆ. ಇಂತಹ ಪ್ರಭಾವ ಹೊಂದಿರುವ ವೈದ್ಯರ ಹಾಗೂ ಆಸ್ಪತ್ರೆಗಳ ವಿರುದ್ಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡದಿಂದ ನ್ಯಾಯ ಸಿಗಬಹುದೆಂದು ನಿರೀಕ್ಷಿಸುವುದು ಹಾಸ್ಯಾಸ್ಪದವಾಗಿದೆ. ಇಲ್ಲಿ ಆರೋಪಿಗಳಾಗಿರುವ ವೈದ್ಯರುಗಳೆಲ್ಲರೂ ಖಾಸಗಿ ವ್ಯಕ್ತಿಗಳಾಗಿರುವುದರಿಂದ, ಆರೋಗ್ಯಾ ಇಲಾಖಾ ತನಿಖೆಯ ಅಗತ್ಯವಿಲ್ಲ. ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮಾಡಲಿ ಎಂದು ಎಸ್ಡಿಪಿಐ ಆಗ್ರಹಿಸಿದೆ.
ಆದ್ದರಿಂದ ಸರಕಾರವು ಕೂಡಲೇ ಸಂತ್ರಸ್ತೆ ನೀಡಿರುವ ದೂರನ್ನು ದಾಖಲಿಸಿಕೊಂಡು ವೈದ್ಯ ವೃತ್ತಿಗೆ ದ್ರೋಹವೆಸಗಿದ ವೈದ್ಯರ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಗೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದ ಮಂಗಳೂರಿಗೆ ಕಪ್ಪು ಚುಕ್ಕೆಯಾದ ಈ ಘಟನೆಯನ್ನ ನ್ಯಾಯಾಂಗ ತನಿಖೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಪಕ್ಷವು ಸರಕಾರದೊಂದಿಗೆ ಆಗ್ರಹಿಸುತ್ತಿದೆ ಎಂದು ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ