Home ಟಾಪ್ ಸುದ್ದಿಗಳು ಪ್ರಚೋದನಕಾರಿ ಭಾಷಣ: ಮುತಾಲಿಕ್ ಬಂಧನಕ್ಕೆ SDPI ಆಗ್ರಹ

ಪ್ರಚೋದನಕಾರಿ ಭಾಷಣ: ಮುತಾಲಿಕ್ ಬಂಧನಕ್ಕೆ SDPI ಆಗ್ರಹ

ಬೆಂಗಳೂರು: ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಂಧನಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಆಗ್ರಹಿಸಿದೆ.


ಈ ಕುರಿತು ಎಕ್ಸ್(ಟ್ವಿಟರ್) ಪೋಸ್ಟ್ ಮಾಡಿರುವ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಶಾಂತಿಯುತ ಹಬ್ಬ ಆಚರಿಸಿದ ಹುಬ್ಬಳ್ಳಿ ವಾತಾವರಣ ಕೆಡಿಸುವ ಉದ್ದೇಶದಿಂದ “ಮಸೀದಿ ಒಳಗಡೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ” ಎಂಬ ಪ್ರಚೋದನಕಾರಿ ಹೇಳಿಕೆ ನೀಡಿ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಕ್ಷಣ ಬಂಧಿಸಿ ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ವಿಸರ್ಜನೆ ವೇಳೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪ್ರಮೋದ್ ಮುತಾಲಿಕ್, ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು. ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಇವರು ದೇಶ ವಿಭಜನೆ ಮಾಡಿದ ದ್ರೋಹಿಗಳು. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿಮ್ಮ ನಮಾಜ್ಗೂ ನಾವು ಅಡ್ಡಿಪಡಿಸಬೇಕಾಗುತ್ತೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್ ಗೆ ಅವಕಾಶ ಕೊಡದಂತೆ ಕೋರ್ಟ್ ಗೆ ಹೋಗುತ್ತೇವೆ. ಇದು ಪಾಕಿಸ್ತಾನವಲ್ಲ, ನಿಮ್ಮಪ್ಪನ ಆಸ್ತಿಯಲ್ಲ, ವಿರೋಧಿಗಳ ಸೊಕ್ಕಡಗಿಸುವ ತಾಕತ್ತು ನಮಗಿದೆ ಅಂತ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

Join Whatsapp
Exit mobile version