ಮಂಗಳೂರು: ಕರಾವಳಿಯಾದ್ಯಂತ ಜೂನ್ 29ಕ್ಕೆ ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಿದೆ. ಪ್ರಾಣಿ ಬಲಿದಾನ ನೀಡುವುದು ಈ ಹಬ್ಬದ ಪ್ರಮುಖ ಅಂಶವಾಗಿದೆ. ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರು ಪಶು ಸಂಗೋಪನೆ ಇಲಾಖೆಯ ಪರವಾನಿಗೆ ಇದ್ದರೂ ಕೂಡ ಜಾನುವಾರು ಸಾಗಾಟದ ಹೆಸರಿನಲ್ಲಿ ಮಾರಕಾಯುಧಗಳಿಂದ ದಾಳಿ ನಡೆಸುತ್ತಿರುವ ಘಟನೆಗಳು ನಡೆಯುತ್ತಾ ಇವೆ. ಹಾಗಾಗಿ ಬಕ್ರೀದ್ ಸಂದರ್ಭ ಪ್ರಾಣಿ ಬಲಿಗೆ ಅಡ್ಡಿಯಾಗದಂತೆ ಮತ್ತು ಜಾನುವಾರು ಸಾಗಾಟಗಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ನಿರ್ಭೀತಿಯಿಂದ ಪ್ರಾಣಿ ಬಲಿ ಅರ್ಪಿಸಲು ಸಹಕಾರಿಯಾಗುವಂತೆ ಕರ್ನಾಟಕ ಸರ್ಕಾರ ರಾಜ್ಯ ಪೋಲಿಸ್ ಇಲಾಖೆಗೆ ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಆಗ್ರಹಿಸಿದ್ದಾರೆ.
ಕಳೆದ ಕೆಲವು ತಿಂಗಳಿನಲ್ಲಿ ಹಲವು ಕಡೆಗಳಲ್ಲಿ ಗೋಸಾಗಾಟಗಾರರನ್ನು ಗುರಿಯಾಗಿಸಿ ಸಂಘಪರಿವಾರದ ಕಾರ್ಯಕರ್ತರು ಮಾರಕಾಯುಧಗಳಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ.
ಅದಲ್ಲದೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮತ್ತು ಸಂಘಪರಿವಾರದ ನಾಯಕರು ಕೂಡ ಬಕ್ರೀದ್ ಹಬ್ಬದ ಪ್ರಾಣಿ ಬಲಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದಲ್ಲಿ ಮುಂದಾಗುವ ಎಲ್ಲಾ ಅನಾಹುತಕ್ಕೆ ಇಲಾಖೆಯೇ ಕಾರಣ ಎಂದು ಎಚ್ಚರಿಕೆ ನೀಡುವ ಮೂಲಕ ನೇರವಾಗಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ.
ಅದಕ್ಕೆ ಪೂರಕವೆಂಬಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಅಕ್ರಮ ಜಾನುವಾರು ಸಾಗಾಟ ತಡೆಗೆ ಕ್ರಮ ಕೈಗೊಳ್ಳಬೇಕೆಂಬ ಆದೇಶವನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಯಿಂದ ಮುಸ್ಲಿಮರು ಸಂಭ್ರಮ ಸಡಗರದಿಂದ ಆಚರಿಸಬೇಕಾದ ತಮ್ಮ ಧಾರ್ಮಿಕ ಹಬ್ಬವನ್ನು ಭಯ ಮತ್ತು ಆತಂಕದಿಂದ ಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಬಿಜೆಪಿಯ ಕೋಮು ಧ್ರುವೀಕರಣ ಆಡಳಿತದಿಂದ ಬೇಸತ್ತಿದ್ದ ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತರುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಆ ಮೂಲಕ ನಿರ್ಭೀತಿಯ ವಾತಾವರಣವನ್ನು ಬಯಸಿದ್ದರು. ಆದರೆ ಮುಸ್ಲಿಮರ ಧಾರ್ಮಿಕ ಹಬ್ಬವಾದ ಬಕ್ರೀದ್ ನಲ್ಲಿ ಪ್ರಾಣಿ ಬಲಿ ನೀಡಿ ಅದನ್ನು ಬಡವರಿಗೆ ದಾನ ಮಾಡುವುದು ಈ ಹಬ್ಬದ ಪ್ರಮುಖ ಅಂಶವಾಗಿದೆ.ಆದರೆ ಈ ಬಗ್ಗೆ ಸಂಘಪರಿವಾರದ ಮುಖಂಡರುಗಳ ಪ್ರಚೋದನಕಾರಿ ಹೇಳಿಕೆ, ಜಿಲ್ಲಾಡಳಿತಗಳ ತೀರ್ಮಾನಗಳು ನೀಡುತ್ತಿದ್ದರು ಕೂಡ ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು, ಶಾಸಕರು, ಸಚಿವರುಗಳು ಯಾವುದೇ ಹೇಳಿಕೆ ನೀಡದೆ ಮೌನ ನಡೆಯನ್ನು ಇಟ್ಟಿರುವುದು ಆತಂಕಕಾರಿಯಾಗಿದೆ.
ಹಾಗಾಗಿ ಸರ್ಕಾರ ಈ ಬಗ್ಗೆ ಕೂಡಲೇ ಕಾರ್ಯಪ್ರವೃತವಾಗಿ ಜಿಲ್ಲಾಡಳಿತಗಳಿಗೆ ನಿರ್ಭೀತಿಯಿಂದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಿ ಸರ್ಕಾರದ ಅಧಿಕೃತ ನಿಲುವು ಪ್ರಕಟಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.