Home ಟಾಪ್ ಸುದ್ದಿಗಳು ದಲಿತ ವಿದ್ಯಾರ್ಥಿನಿಯರಿಗೆ ಹಲ್ಲೆ: ಸಾಂತ್ವನ ಹೇಳಿ ಧೈರ್ಯ ತುಂಬಿದ ಎಸ್ ಡಿಪಿಐ ನಿಯೋಗ

ದಲಿತ ವಿದ್ಯಾರ್ಥಿನಿಯರಿಗೆ ಹಲ್ಲೆ: ಸಾಂತ್ವನ ಹೇಳಿ ಧೈರ್ಯ ತುಂಬಿದ ಎಸ್ ಡಿಪಿಐ ನಿಯೋಗ

ಶ್ರೀನಿವಾಸಪುರ: ಕೋಲಾರದ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ ಗ್ರಾಮದ ದಲಿತ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. IPC ಕಲಂ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಬೇಕು ಎಂದು ಎಸ್ ಡಿಪಿಐ ಒತ್ತಾಯಿಸಿದೆ.


ಹಲ್ಲೆ ನಡೆಸಿದ ವಿಷಯ ತಿಳಿದು ಎಸ್ ಡಿಪಿಐ ರಾಜ್ಯ ನಾಯಕರನ್ನೊಳಗೊಂಡ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ದಲಿತ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿ ಧೈರ್ಯವನ್ನು ತುಂಬಿದೆ. ತದನಂತರ ತಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದ ನಿಯೋಗ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ಒದಗಿಸಲು ಮನವಿ ಮಾಡಿತು. ಎಸ್ ಡಿಪಿಐ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಪರಿಹಾರ ಹಾಗೂ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.
ಆರೋಪಿಗಳನ್ನು ತಕ್ಷಣ ಬಂಧಿಸಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು IPC ಕಲಂ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಬೇಕೆಂದು ಎಸ್ ಡಿಪಿಐ ಒತ್ತಾಯಿಸಿದೆ.


ನಿಯೋಗದಲ್ಲಿ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಮುಜಾಹಿದ್ ಪಾಷ, ರಾಜ್ಯ ಸಮಿತಿ ಸದಸ್ಯರಾದ ಬಿ. ಆರ್. ಭಾಸ್ಕರ್ ಪ್ರಸಾದ್, ಕೋಲಾರ ಜಿಲ್ಲಾಧ್ಯಕ್ಷರಾದ ಶಾಹುಝಮಾ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.


ಘಟನೆಯ ವಿವರ:
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ ಗ್ರಾಮದ ದಲಿತ ಹೆಣ್ಣುಮಕ್ಕಳು ಚಿಂತಾಮಣಿ ಶಾಲೆಗೆ ಬಸ್ಸಿನಲ್ಲಿ ದಿನನಿತ್ಯ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಪುಂಡರ ಗುಂಪು ನಿರಂತರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಹೆಣ್ಣುಮಕ್ಕಳು ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಪೋಷಕರು ಬುದ್ಧಿವಾದ ಹೇಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಅವರ ಪುಂಡಾಟ ಕೊನೆಗೊಳ್ಳಲಿಲ್ಲ. ದಿನಾಂಕ 04/09/2021 ರಂದು ಬೆಳಗ್ಗೆ 8:30 ಕ್ಕೆ ಕಾಲೇಜಿಗೆ ಹೋಗುತ್ತಿರುವಾಗ ಬಸ್ಸಿನ ಒಳಗೆ ನುಗ್ಗಿ ಹೆಣ್ಣುಮಕ್ಕಳನ್ನು ಎಳೆದು ಹಿಗ್ಗಾ ಮುಗ್ಗಾ ತಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಹೋದ 6 ಜನ ಸಂಬಂಧಿಕರನ್ನು ಸುಮಾರು 50 ಜನರ ಗುಂಪು ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಗಾಯಗೊಂಡ ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 9 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Join Whatsapp
Exit mobile version