ನವದೆಹಲಿ : ದೇಶದ ಆರ್ಥಿಕ ಕುಸಿತದಿಂದ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ಈಗ ಉಗ್ರರಿಗೆ ಹಣ ವರ್ಗಾವಣೆ ಮಾಡಿದ ಆರೋಪದ ಹೆಸರಿನಲ್ಲಿ ಮುಸ್ಲಿಂ ಚಾರಿಟಿ ಸಂಸ್ಥೆಗಳನ್ನು ಬೇಟೆಯಾಡಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಹೇಳಿದ್ದಾರೆ. ಈ ಕುರಿತು ಪತ್ರಿಕಾಹೇಳಿಕೆಯನ್ನು ಅವರು ಬಿಡುಗಡೆಗೊಳಿಸಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ‘ದಿ ಮಿಲ್ಲಿ ಗೆಜೆಟ್’ನ ಸಂಪಾದಕ ಮತ್ತು ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಇ ಮುಷಾವರದ ಮಾಜಿ ಅಧ್ಯಕ್ಷ ಮತ್ತು ‘ಫರೋಸ್ ಮೀಡಿಯಾ ಮತ್ತು ಪಬ್ಲಿಷಿಂಗ್ ಪ್ರೈ. ಲಿಮಿಟೆಡ್’ ನ ವ್ಯವಸ್ಥಾಪಕ ನಿರ್ದೇಶಕ ಝಫರುಲ್ ಇಸ್ಲಾಂ ನೇತೃತ್ವದ ಚಾರಿಟಿ ಅಲೈಯನ್ಸ್ ನ ಕಚೇರಿ ಮತ್ತು ದೆಹಲಿಯ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಕಚೇರಿಯ ಮೇಲಿನ ಎನ್ಐಎ ದಾಳಿ ಜನರ ಗಮನ ಬೇರೆಡೆಗೆ ಸೆಳೆಯಲು ಫ್ಯಾಸಿಸ್ಟ್ ಸರ್ಕಾರ ನಡೆಸಿರುವ ಇತ್ತೀಚಿನ ಪ್ರಯತ್ನವಾಗಿದೆ. ಪಾರದರ್ಶಕವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಕಳಂಕ ತರುವ ಗುರಿಯೊಂದಿಗೆ ನಡೆಸಿರುವ ಇಂತಹ ದಾಳಿಗಳನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಕಾರ್ಯಗಳನ್ನು ದೇಶಭಕ್ತಿ ಮತ್ತು ಮುಸ್ಲಿಂ ‘ದೇಶದ್ರೋಹಿಗಳ ವಿರುದ್ಧ’ ಎಂಬ ಹಣೆಪಟ್ಟಿಯೊಂದಿಗೆ ಮಾಡಿದರೆ ತಾವು ನಡೆಸುವ ಯಾವುದೇ ಅವಿವೇಕತನದ ಕೃತ್ಯವನ್ನು ನಮ್ಮ ಧರ್ಮಾಂಧ ಅನುಯಾಯಿಗಳು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ ಎಂದು ಕೇಂದ್ರ ಸರ್ಕಾರವು ವಿಶ್ವಾಸ ಹೊಂದಿದೆ. ಸಂಪೂರ್ಣ ಕೇಸರಿಮಯವಾಗಿರುವ ರಾಷ್ಟ್ರೀಯ ಮಾಧ್ಯಮವು ಆರೆಸ್ಸೆಸ್ ಮಾರ್ಗದರ್ಶಿತ ಕೇಂದ್ರ ಸರಕಾರ ಕಕ್ಕಿದ ಯಾವುದೇ ಸುಳ್ಳನ್ನು ಮತ್ತು ನಕಲಿ ಸುದ್ದಿಯನ್ನು ಯಶಸ್ವಿಯಾಗಿ ಹರಡುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಜಫರುಲ್ ಇಸ್ಲಾಂ ಖಾನ್ ಅವರ ಬಲವಾದ ಫ್ಯಾಸಿಸ್ಟ್ ವಿರೋಧಿ ನಿಲುವು ಸಂಘಿಗಳಿಗೆ ಗಂಟಲ ಮುಳ್ಳಾಗಿ ಪರಿಣಮಿಸಿದೆ. ಕೆಲವು ತಿಂಗಳ ಹಿಂದೆ ಅವರ ಮನೆಯ ಮೇಲೆ ದಾಳಿ ನಡೆಸಿದ ನಂತರ ಸರ್ಕಾರ ಅವರನ್ನು ಬಂಧಿಸಲು ನಿರಂತರ ನಿರರ್ಥಕ ಪ್ರಯತ್ನ ನಡೆಸಿತ್ತು. ಚಾರಿಟಿ ಅಲೈಯನ್ಸ್ ಮತ್ತು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಮುಂತಾದ ಚಾರಿಟಿ ಸಂಸ್ಥೆಗಳು ಹಲವು ವರ್ಷಗಳಿಂದ ಚಾರಿಟಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಉತ್ತರ ಭಾರತದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮತ್ತು ದೀನ ದಲಿತರ ಉನ್ನತಿಗಾಗಿ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳ ನಾಯಕರು ಪೌರತ್ವ ವಿರೋಧಿ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದುದೇ ಫ್ಯಾಸಿಸ್ಟರು ಈ ಸಂಸ್ಥೆಗಳನ್ನು ಗುರಿಯಾಗಿಸಲು ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ವಿರೋಧ ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನು ನಿಗ್ರಹಿಸುವ ಸರ್ಕಾರದ ಪ್ರಯತ್ನಗಳು ಯಶಸ್ವಿಯಾಗಲಾರದು ಎಂಬುದನ್ನು ಸರ್ಕಾರ ನೆನಪಿಟ್ಟುಕೊಳ್ಳುವುದು ಉತ್ತಮ. ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮತ್ತು ಫ್ಯಾಸಿಸಂ ವಿರುದ್ಧ ಹೋರಾಡಲು ಬದ್ಧವಾಗಿರುವ ಸಮುದಾಯದ ಸ್ಥಿರತೆಯನ್ನು ದಾಳಿಗಳು, ಬಂಧನಗಳು ಮತ್ತು ನಕಲಿ ಪ್ರಕರಣಗಳ ಮೂಲಕ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನೂ ಸರ್ಕಾರ ಅರಿತುಕೊಳ್ಳುವುದು ಒಳಿತು ಎಂದು ಅವರು ತಿಳಿಸಿದ್ದಾರೆ.