October 26, 2020
SDPI ಕಾರ್ಯಕರ್ತ ಸಲಾಹುದ್ದೀನ್ ಹತ್ಯೆ । ಮತ್ತೆ ನಾಲ್ವರು RSS ಕಾರ್ಯಕರ್ತರ ಬಂಧನ

ಕಣ್ಣೂರಿನಲ್ಲಿ ಎಸ್ಡಿಪಿಐ ಕಾರ್ಯಕರ್ತ ಸ್ವಲಾಹುದ್ದೀನ್ ಹತ್ಯೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೆಸ್ಸೆಸ್ಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇವರು ಹತ್ಯೆಯಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಬಂಧಿಸಲ್ಪಟ್ಟವರ ಸಂಖ್ಯೆ ಒಂಬತ್ತಕ್ಕೇರಿದೆ.
ಕನ್ನವಂ ಶಿವಾಜಿ ನಗರದ ಅಶ್ವಿನ್, ಕೋಳಯಾಡ್ ನ ರಾಹುಲ್, ಚೆಂಡಯಾಡ್ ನ ಮಿಥುನ್, ಮುಗೇರಿಯ ಯಾದವ್‌ನನ್ನು ತನಿಖಾ ತಂಡ ಬಂಧಿಸಿದೆ. ಅವರು ಈ ಪ್ರದೇಶದ ಆರೆಸ್ಸೆಸ್ಸ್ ನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ನಿನ್ನೆ ರಾತ್ರಿ ಕೂತ್ತುಪರಂಬ ತೋಕ್ಕಿಕುಡಿ ಪಾಲಾಝಿ ದೇವಸ್ಥಾನದ ಬಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಕಣ್ಣೂರು, ವಯನಾಡ್, ಮಲಪ್ಪುರಂ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದೆವು ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ.
ಹತ್ಯೆಯಲ್ಲಿ ನೇರ ಭಾಗಿಯಾದ ಇಬ್ಬರು, ಹತ್ಯೆಗೆ ಸಂಚು ಹೂಡಿದವರು, ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ ಮೂವರು ಸೇರಿದಂತೆ ಐವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಸಲಾಹುದ್ದೀನ್ ಅವರ ಕಾರಿಗೆ ಬೈಕಿನಿಂದ ಡಿಕ್ಕಿ ಹೊಡೆದ ವ್ಯಕ್ತಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಕಾರು, ಬೈಕು ಮತ್ತು ಶಸ್ತ್ರಾಸ್ತ್ರಗಳನ್ನು ಈ ಹಿಂದೆ ವಶಪಡಿಸಿಕೊಳ್ಳಲಾಗಿತ್ತು.
ಕಳೆದ ತಿಂಗಳು 8ರಂದು ತನ್ನ ಸಹೋದರಿಯರೊಂದಿಗೆ ಪ್ರಯಾಣಿಸುತ್ತಿದ್ದ ಸ್ವಲಾಹುದ್ದೀನ್ ರನ್ನು ಆರೆಸ್ಸೆಸ್ಸಿನ ಕಿಡಿಗೇಡಿಗಳು ಹತ್ಯೆ ಮಾಡಿದ್ದರು. ಸ್ವಲಾಹುದ್ದೀನ್ ಎಬಿವಿಪಿ ಕಾರ್ಯಕರ್ತ ಶ್ಯಾಮಪ್ರಸಾದ್ ಹತ್ಯೆಯಲ್ಲಿ ಏಳನೇ ಆರೋಪಿಯಾಗಿದ್ದಾರೆ. ಆರೋಪಿಗಳನ್ನು ಕೂತುಪರಂಬ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ರಿಮಾಂಡ್ ಮಾಡಲಾಗಿದೆ.