ಬಂಟ್ವಾಳ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಸ್ ಡಿ ಪಿ ಐ ಜಿಲ್ಲಾ ಕಚೇರಿಗೆ ನಡೆಸಿದ ಅತಿಕ್ರಮಣದ ದಾಳಿಯನ್ನು ಹಾಗೂ ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ಇಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ ಸಿ ರೋಡಿನ ಕೈಕಂಬದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಶ್ ಅಲಿ ಮಾತನಾಡಿ, “ಗಾಂಧಿಯ ಹತ್ಯೆ, ಬಾಬರೀ ಮಸ್ಜಿದ್ ಧ್ವಂಸ ಮತ್ತು ಗುಜರಾತ್ , ಭಾಗಲ್ ಪುರ ಹತ್ಯಾಕಾಂಡಗಳಂತಹ ಭಯೋತ್ಪಾದಕ ಕೃತ್ಯಗಳ ಇತಿಹಾಸಗಳಿರುವ ಆರೆಸ್ಸೆಸ್ ಮತ್ತು ಸಂಘಪರಿವಾರದ ಮೇಲೆ ದಾಳಿ ಮಾಡಬೇಕಿದ್ದ NIA ಗೆ ದಾಳಿ ಮಾಡುವ ದಾರಿ ತಪ್ಪಿದೆ. ನಿಮಗೆ ಪಿ ಎಫ್ ಐ ಎಂಬ ಸಾಮಾಜಿಕ ಸಂಘಟನೆಯನ್ನು ದಮನಿಸಲು ಅಸಾಧ್ಯ. ಯಾಕೆಂದರೆ ನೀವು ನೂರು ವರ್ಷ ಮಾಡಿದ ಕಾರ್ಯವನ್ನು ಪಿ ಎಫ್ ಐ ಬರೀ ಇಪ್ಪತ್ತೈದು ವರ್ಷಗಳಲ್ಲಿ ಮಾಡಿ ಮುಗಿಸಿದೆ. ಇಡೀ ದೇಶಾದ್ಯಂತ ದೇಶ ರಕ್ಷಣೆಯ ಆಶಯ – ಸಿದ್ಧಾಂತಗಳನ್ನು ಜನರಿಗೆ ಪಿ ಎಫ್ ಐ ಮನವರಿಕೆ ಮಾಡಿ ಕೊಟ್ಟಿದೆ. ಕನಿಷ್ಠ ಪಕ್ಷ ಆರೆಸ್ಸೆಸ್ಸನ್ನು ವಿರೋಧಿಸುವ ಚಿತ್ತವನ್ನು ಜನರಿಗೆ ಪಿ ಎಫ್ ಐ ತಿಳಿಸಿಕೊಟ್ಟಿದೆ” ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮುಖ್ಯ ಪ್ರಭಾಷಣಗೈದ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ” NIA ಮತ್ತು ಬಿಜೆಪಿ ಸರಕಾರವು ಸಾಮಾಜಿಕ ಸಂಘಟನೆಯಾದ ಪಿ ಎಫ್ ಐ ಯ ನಾಯಕರನ್ನು ಬಂಧಿಸಿದಾಕ್ಷಣ ನಾಯಕರಾರೂ ಇಲ್ಲ ಎಂಬ ತಿರುಕನ ಕನಸು ಕಂಡಿರಬಹುದು. ಆದರೆ ಪಿ ಎಫ್ ಐ ಯ ಪ್ರತಿಯೊಂದು ಸದಸ್ಯರೂ ಕೂಡ ನಾಯಕರೆಂಬ ನಿಜಾಂಶವನ್ನು ಬಿಜೆಪಿ ತಿಳಿದುಕೊಳ್ಳಬೇಕು. ಪಿ ಎಫ್ ಐ ಯ ಆಳ ಮತ್ತು ಅಗಲ ದೇಶವಿಡೀ ವಿಸ್ತರಿಸಿವೆ. ಪಿ ಎಫ್ ಐ ಯನ್ನು ಸೈದ್ಧಾಂತಿಕವಾಗಿ ಎದುರಿಸಲು ವಿಫಲಗೊಂಡ ಆರೆಸ್ಸೆಸ್ ಮತ್ತು ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ದಾಳಿಗಳನ್ನು ಮಾಡುವ ಮೂಲಕ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನ ವಿಫಲ ಪ್ರಯತ್ನವಾಗಿದೆ. ನಿಮಗೆ ಪಿ ಎಫ್ ಐ ಯ ಭಯವಿದೆ ಎಂಬುವುದು ಈ ದಾಳಿಯ ಮೂಲಕ ಬಹಿರಂಗವಾಗಿ ಗೋಚರವಾಗುತ್ತಿದೆ. ಇದು ನಿಮ್ಮ ತಾತ್ಕಾಲಿಕ ಗೆಲುವು ” ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದರು.
ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು ಮಾತನಾಡಿ ” ಒಂದು ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿರುವ ರಾಜಕೀಯ ಪಕ್ಷವಾಗಿ ಎಸ್ ಡಿ ಪಿ ಐ ಯು, ಸಂವಿಧಾನಾತ್ಮಕ ನಿಲುವಿನಲ್ಲಿ ಕಾರ್ಯಾಚರಿಸುತ್ತಿರುವ ಪಿ ಎಫ್ ಐ ಸಂಘಟನೆಯ ಜೊತೆ ಸದಾ ನಿಲ್ಲಲಿದೆ. ಮಾನವ ಸೇವೆಗಳಲ್ಲಿ ಸದಾ ನಿರತವಾಗುತ್ತಿದ್ದ ಪಿ ಎಫ್ ಐ ಮತ್ತು ನೊಂದಾಯಿತ ರಾಜಕೀಯ ಪಕ್ಷ ಎಸ್ ಡಿ ಪಿ ಐ ಕಛೇರಿ ಮೇಲೆ ದಾಳಿ ಮಾಡಿರುವುದು ಹೇಡಿತನಕ್ಕೆ ಸಾಕ್ಷಿ” ಎಂದು ವ್ಯಂಗ್ಯ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ದ.ಕ ಜಿಲ್ಲಾ ಸದಸ್ಯರುಗಳಾದ ಶಾಹುಲ್ ಎಸ್ ಎಚ್ , ಯೂಸುಫ್ ಆಲಡ್ಕ , ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಹಾಗೂ ಪುರಸಭಾ ಸದಸ್ಯರಾದ ಇದ್ರೀಸ್ ಪಿ ಜೆ ಮತ್ತು ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಅಶ್ರಫ್ ತಲಪಾಡಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದನೆಗೈದರು. ಘೋಷಣೆಗಳ ಮೂಲಕ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.