Home ಟಾಪ್ ಸುದ್ದಿಗಳು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ: ಅಜ್ಜ, ಇಬ್ಬರು ಮೊಮ್ಮಕ್ಕಳು ಸಾವು, ಸೊಸೆ ಗಂಭೀರ

ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ: ಅಜ್ಜ, ಇಬ್ಬರು ಮೊಮ್ಮಕ್ಕಳು ಸಾವು, ಸೊಸೆ ಗಂಭೀರ

ಮಂಡ್ಯ; ರಸ್ತೆ ಬದಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟು ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ತುಮಕೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.


ನಾಗಮಂಗಲ ತಾಲೂಕಿನ ಹೊಣಕೆರೆಯ ಜೆಡಿಎಸ್ ಮುಖಂಡ ಹಾಗೂ ಮಾಜಿ ತಾ.ಪಂ.ಸದಸ್ಯ ಆನಂದ್ ಕುಮಾರ್(62) ಹಾಗೂ ಮೊಮ್ಮಕ್ಕಳಾದ ಆರಾಧ್ಯ(10) ಹಾಗೂ ಗೌರವ್(5) ಮೃತ ವ್ಯಕ್ತಿಗಳು. ಘಟನೆಯಲ್ಲಿ ಆನಂದ್ ಕುಮಾರ್ ಸೊಸೆ ಮೋನಿಕಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.


ಗುಡ್ಡೇನಹಳ್ಳಿ ಸಮೀಪದ ತೋಟದ ಮನೆಯಿಂದ ಸ್ವಗ್ರಾಮ ಹೊಣಕೆರೆಗೆ ತಮ್ಮ ಇಬ್ಬರು ಮೊಮ್ಮಕ್ಕಳು ಹಾಗೂ ಸೊಸೆಯೊಂದಿಗೆ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ರಾತ್ರಿ 8.40ರ ವೇಳೆಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡೇನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಆನಂದ್ ಕುಮಾರ್ ಚಾಲನೆ ಮಾಡುತ್ತಿದ್ದ ಸ್ಕೂಟರ್, ಲಾರಿ ಮುಂಭಾಗಕ್ಕೆ ಅಪ್ಪಳಿಸಿ ಸಿಲುಕಿಕೊಂಡ ಪರಿಣಾಮ ಮೊಮ್ಮಗಳು ಆರಾಧ್ಯ ಸ್ಥಳದಲ್ಲೇ ಕೊನೆಯುಸಿರೆಳೆದರೆ, 5 ವರ್ಷದ ಮೊಮ್ಮಗ ಗೌರವ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣಬಿಟ್ಟಿದ್ದಾನೆ.


ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಆನಂದ್ ಕುಮಾರ್ ಮತ್ತು ಸೊಸೆ ಮೊನಿಕಾಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆಂದು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆನಂದ್ ಕುಮಾರ್ ಮೃತಪಟ್ಟಿದ್ದಾರೆ. ಸೊಸೆ ಮೋನಿಕಾ ಸಾವು-ಬದುಕಿನ ನಡುವೆ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.


ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ.
ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version