ನವದೆಹಲಿ: ಉತ್ತರಾಖಂಡದ ಹಲ್’ದ್ವಾನಿಯ ಬನ್’ಭೂಲ್’ಪುರ ಪ್ರದೇಶದಲ್ಲಿರುವ ರೈಲ್ವೆ ಭೂಮಿಯಿಂದ 4,000 ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಭಾರತೀಯ ರೈಲ್ವೆ ನಡೆಸುತ್ತಿರುವ ತೆರವು ಕಾರ್ಯಾಚರಣೆ ವಿಧಾನಕ್ಕೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ಅಸಮ್ಮತಿ ಸೂಚಿಸಿತು.
“ವಿವಾದಿತ ಭೂಮಿಯಲ್ಲಿ ಯಾವುದೇ ನಿರ್ಮಾಣ ಅಥವಾ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದು. ವಿಚಾರಣೆಗೆ ತಡೆ ನೀಡಿಲ್ಲ ಮತ್ತು ಹೈಕೋರ್ಟ್‌ನ ನಿರ್ದೇಶನಗಳಿಗೆ ಮಾತ್ರ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹಲವು ದಶಕಗಳಿಂದ ಸಂತ್ರಸ್ತರ ಸ್ವಾಧೀನದಲ್ಲಿರುವ ಭೂಮಿ ಇದಾಗಿದ್ದು, ಇವರಲ್ಲಿ ಬಹುತೇಕ ಮಂದಿ ಭೂಮಿಯ ಒಡೆತನ ಹೊಂದಿರುವುದಾಗಿ ಹೇಳುತ್ತಿದ್ದಾರೆ. ಅನೇಕರು ಸುಮಾರು 60 ವರ್ಷಗಳಿಂದ ಈ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
ಪ್ರಕರಣ ಮಾನವೀಯ ಅಂಶಗಳನ್ನು ಒಳಗೊಂಡಿರುವುದರಿಂದ ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಪೀಠ ತಾಕೀತು ಮಾಡಿತು. “ಜನ 1947ರ ನಂತರ ಹರಾಜಿನಲ್ಲಿ ಖರೀದಿಸಿ ಸ್ವಾಧೀನಪಡಿಸಿಕೊಂಡಿದ್ದು ಈ ಪರಿಸ್ಥಿತಿಯನ್ನು ನೀವು (ಭಾರತೀಯ ರೈಲ್ವೆ) ಹೇಗೆ ಎದುರಿಸುತ್ತೀರಿ ಎಂಬುದು ನಮ್ಮನ್ನು ತೊಂದರೆಗೀಡು ಮಾಡಿದೆ. ನೀವು ಭೂಮಿ ಸ್ವಾಧೀನಪಡಿಸಿಕೊಳ್ಳಬಹುದು. ಆದರೆ 60-70 ವರ್ಷಗಳ ಕಾಲ ವಾಸಿಸುತ್ತಿದ್ದ ಜನರು ಪುನರ್ವಸತಿಯಾಗಬೇಕು. ಎಲ್ಲ ಸಮಸ್ಯೆಗೂ ಅಂತ್ಯ ಎನ್ನುವುದಿರುತ್ತದೆ. ಈಗ ಏನು ನಡೆಯುತ್ತಿದೆಯೋ ಅದಕ್ಕೆ ನಮ್ಮ ಪ್ರೋತ್ಸಾಹ ಇಲ್ಲ” ಎಂದು ನ್ಯಾ. ಕೌಲ್ ಹೇಳಿದರು.
ಯಾವುದೇ ಭೂ ಹಕ್ಕುಗಳಿಲ್ಲದೆ ಜನ ಅತಿಕ್ರಮಣ ಮಾಡಿಕೊಂಡಿದ್ದಾಗಲೂ ಕೂಡ ಸರ್ಕಾರಗಳು ಪುನರ್ವಸತಿ ಕಲ್ಪಿಸಿವೆ ಎಂದ ಪೀಠ ಹಕ್ಕುಗಳಿಲ್ಲದ ಪ್ರಕರಣಗಳಲ್ಲಿ ಕೂಡ ಪುನರ್ವಸತಿ ಕಲ್ಪಿಸಬೇಕು. ಆದರೆ ಕೆಲವೆಡೆ ಅವರು ಹಕ್ಕುಗಳನ್ನು ಸಹ ಹೊಂದಿದ್ದಾರೆ. ಅಂತಹ ಸಂದರ್ಭಗಳಲ್ಲಿ ನೀವು ಪರಿಹಾರ ಹುಡುಕಬೇಕಿದೆ. ಪ್ರಕರಣಕ್ಕೆ ಮಾನವೀಯ ಆಯಾಮ ಇದೆ” ಎಂದು ನ್ಯಾಯಾಲಯ ಹೇಳಿತು.
ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸದ ಪರಿಣಾಮವಾಗಿ ನ್ಯಾಯಾಲಯ ರೈಲ್ವೇ ಪರವಾಗಿ ತೀರ್ಪು ನೀಡಿತು. ಅಲ್ಲದೆ ಸಮಾಜದಂಚಿನಲ್ಲಿರುವ ತಮ್ಮನ್ನು ತೆರವುಗೊಳಿಸುವುದರಿಂದ ತಾವು ನಿರಾಶ್ರಿತರಾಗುವುದಾಗಿ ಅರ್ಜಿದಾರರು ವಾದಿಸಿದರು. ಅರ್ಜಿದಾರರನ್ನು ಹಿರಿಯ ನ್ಯಾಯವಾದಿ ಕಾಲಿನ್ ಗೊನ್ಸಾಲ್ವೇಸ್ ಪ್ರತಿನಿಧಿಸಿದ್ದರು. ಭಾರತೀಯ ರೈಲ್ವೇ ಪರ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ವಾದ ಮಂಡಿಸಿದರು.
(ಕೃಪೆ: ಬಾರ್&ಬೆಂಚ್)