Home ಟಾಪ್ ಸುದ್ದಿಗಳು ಮುಂಬೈ ಕಾಲೇಜಿನ ಹಿಜಾಬ್ ನಿಷೇಧ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ

ಮುಂಬೈ ಕಾಲೇಜಿನ ಹಿಜಾಬ್ ನಿಷೇಧ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ

►ಬಿಂದಿ, ತಿಲಕ ಧರಿಸಿದ ಹುಡುಗಿಯರಿಗೂ ನಿಷೇಧ ಹೇರುತ್ತೀರಾ: ಸುಪ್ರೀಂ ಪ್ರಶ್ನೆ


ಮುಂಬೈ: ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಿಜಾಬ್, ಬುರ್ಕಾ, ಕ್ಯಾಪ್ ಅಥವಾ ಬ್ಯಾಡ್ಜ್ ಗಳನ್ನು ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ನೀಡಿದ್ದ ಸೂಚನೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 9) ತಡೆ ನೀಡಿದೆ.


ಮುಂಬೈನ ಎನ್ ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ. ಕಾಲೇಜು ನೀಡಿದ ಸೂಚನೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಾಂಬೆ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು.


ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಕಾಲೇಜು ವಿಧಿಸಿರುವ ಈ ಷರತ್ತಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ.
“ನೀವು ಬಿಂದಿ ಅಥವಾ ತಿಲಕ ಧರಿಸುವ ಹುಡುಗಿಯರನ್ನು ನಿಷೇಧಿಸುತ್ತೀರಾ,” ಎಂದು ಕಾಲೇಜು ತನ್ನ ಕ್ಯಾಂಪಸ್ ನಲ್ಲಿ ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್ ಧರಿಸುವುದಕ್ಕೆ ಹೇರಿರುವ ನಿಷೇಧ ಕುರಿತು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. “ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್ ಧರಿಸಬಾರದೆಂಬ ನಿರ್ದೇಶನಕ್ಕೆ ಸಂಬಂಧಿಸಿದಂತೆ ಕಾಲೇಜಿನ ಸುತ್ತೋಲೆಗೆ ತಡೆಯಾಜ್ಞೆ ವಿಧಿಸಲಾಗಿದೆ,” ಎಂದು ನ್ಯಾಯಾಲಯ ಹೇಳಿದೆ.

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿಸಿದರೆ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲ್ ಗಳನ್ನು ಧರಿಸಬಹುದು ಮತ್ತು ಈ ಸನ್ನಿವೇಶವನ್ನು ಇದನ್ನು ರಾಜಕೀಯ ಶಕ್ತಿಗಳು ದುರ್ಬಳಕೆ ಮಾಡಬಹುದು ಎಂದು ಕಾಲೇಜು ತನ್ನ ವಾದ ಮಂಡನೆ ವೇಳೆ ತಿಳಿಸಿತ್ತು.


ತನ್ನ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಬಾರದು ಎಂದು ಹೇಳಿದ ನ್ಯಾಯಾಲಯ ಹಾಗೇನಾದರೂ ಆದಲ್ಲಿ ನ್ಯಾಯಾಲಯದ ಕದ ತಟ್ಟಬಹುದು ಎಂದು ಕಾಲೇಜಿಗೆ ಹೇಳಿದೆ.

Join Whatsapp
Exit mobile version