ಬೆಂಗಳೂರು: ಬಿಜೆಪಿ ಸರ್ಕಾರ 2019ರಲ್ಲಿ ಪುಲ್ವಾಮ ದಾಳಿಯನ್ನು ರಾಜಕೀಯವಾಗಿ ಬಳಸಿಕೊಂಡು ಚುನಾವಣೆ ನಡೆಸಿತು. ಆ ಮೂಲಕ ಬಿಜೆಪಿ ಸರ್ಕಾರ ಮತ್ತೆ ಅಧಿಕಾರ ಹಿಡಿಯಿತು. ಸತ್ಯಪಾಲ್ ಮಲ್ಲಿಕ್ ಹಾಗೂ ಶಂಕರ್ ರಾಯ್ ಚೌಧರಿ ಅವರ ಹೇಳಿಕೆ ನೋಡಿದರೆ ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಪುಲ್ವಾಮ ದಾಳಿಯಿಂದ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತದೆ ಎಂಬುದು ಗೊತ್ತಾಗುತ್ತದೆ. ಈ ಪ್ರಕರಣ ಗಂಭೀರವಾಗಿದ್ದು, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಬೇಕು. ಇದು ದೇಶದ ಸೇನೆ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್ ರಮೇಶ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರೀಯ ಭದ್ರತೆ ಅತಿ ಮುಖ್ಯ. ದೇಶ ಸುರಕ್ಷಿತವಾಗಿದ್ದಾಗ ಮಾತ್ರ ದೇಶದ 140 ಕೋಟಿ ಭಾರತೀಯರು ನೆಮ್ಮದಿ ಜೀವನ ಮಾಡಬಹುದು. ಎರಡು ಮೂರು ದಿನಗಳ ಹಿಂದೆ ವೈರ್ ಎಂಬ ಸುದ್ದಿ ಮಾಧ್ಯಮದ ಮುಖ್ಯಸ್ಥರಾದ ಕರಣ್ ತಾಪರ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರ ಸಂದರ್ಶನ ಮಾಡಿದರು. ಇದರಲ್ಲಿ ಪುಲ್ವಾಮ ದಾಳಿಯ ಕುರಿತು ಬಹಳ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎಂದರು.
ಈ ಸಂದರ್ಶನದಲ್ಲಿನ ಹೇಳಿಕೆ ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಭಾರತ ಸೇನೆಯ ಮಾಜಿ ಮುಖ್ಯಸ್ಥ ಶಂಕರ್ ರಾಯ್ ಚೌಧರಿ ಅವರೂ ಕೂಡ ಸತ್ಯಪಾಲ್ ಮಲ್ಲಿಕ್ ಅವರ ಹೇಳಿಕೆಯನ್ನು ಪುಷ್ಟೀಕರಿಸಿ, ದೇಶದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರ ಮೇಲೆ ಆರೋಪ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಸರ್ಕಾರ ದೇಶದ ಸೇನೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಕೃತ್ಯ ತಾಲಿಬಾನಿಗಳಿಂದ ಮಾತ್ರ ಸಾಧ್ಯ. ಇನ್ನು ಕೇಂದ್ರ ಸರ್ಕಾರ 2023ರ ಬಜೆಟ್ ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ 200 ಕೋಟಿ ಆರ್ಥಿಕ ನೆರವು ನೀಡಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಸರ್ಕಾರ ತಾಲಿಬಾನ್ ಸರ್ಕಾರಕ್ಕೆ ಬಜೆಟ್ ನಲ್ಲಿ ಆರ್ಥಿಕ ನೆರವು ನೀಡಿದೆ. ಇದನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಈ ಎಲ್ಲ ಘಟನೆಗಳು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ ಎಂದು ಅವರು ಆರೋಪಿಸಿದರು.
ಮಾನವೀಯತೆ ಹೆಸರಿನಲ್ಲಿ ಬಿಜೆಪಿ ಸರ್ಕಾರ ತಾಲಿಬಾನ್ ಆಡಳಿತ ದೇಶಕ್ಕೆ ಸಹಾಯ ಮಾಡಿದ್ದು, ನಮ್ಮ ದೇಶದಲ್ಲಿರುವ ಮುಸಲ್ಮಾನರ ಮೀಸಲಾತಿಯನ್ನು ತೆಗೆದುಹಾಕಿರುವುದು ಎಷ್ಟು ಸರಿ? ಈ ಮೀಸಲಾತಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದ್ದು, ಈ ತೀರ್ಮಾನ ಸಂವಿಧಾನಾತ್ಮಕವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದರು.